ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಪ್ರಯಾಣಿಕರಾಗಿದ್ದ ಮೂವರು ಮಕ್ಕಳಿಗೆ ಗಾಯಗಳಾಗಿರುವ ದುರ್ಘಟನೆ ಅಮ್ಮುಂಜೆಯಲ್ಲಿ ಮಧ್ಯರಾತ್ರಿ ನಡೆದಿದೆ.

ಅಮ್ಮುಂಜೆ ಗ್ರಾಮದ ಗಾಣೆಮಾರ್ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಮೃತ ಚಾಲಕನನ್ನು ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ (37) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಇವರು ತಮ್ಮ ಸಂಬಂಧಿ ಮಕ್ಕಳಾದ ತುಷಾರ್, ಭವಿತ್ ಮತ್ತು ಪ್ರದೀಪ್ ಅವರನ್ನು ಮೂಡಬಿದರೆಯ ಮಿಜಾರು ಎಂಬಲ್ಲಿಗೆ ಜಾತ್ರೆಗೆ ಕರೆದುಕೊಂಡು ಹೋಗಿ ವಾಪಸ್ಸು ಮನೆಗೆ ಬರುವಾಗ ಈ ದುರ್ಘಟನೆಗೆ ಒಳಗಾಗಿದ್ದಾರೆ.

ಮನೆಗೆ ಕೇವಲ 500 ಮೀಟರ್ ದೂರದಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ ತಲೆಕೆಳಗಾಗಿ ಚರಂಡಿಗೆ ಬಿದ್ದಿದೆ. ರಿಕ್ಷಾ ಅಡಿಯಲ್ಲಿ ಸಿಲುಕಿದ ಮಹಾಬಲ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪಾಣೆಮಂಗಳೂರು ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.