ಮಂಗಳೂರು : ಸಂಘ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದೆ ದೇಶದ ಆರ್ಥಿಕತೆಗೆ ಸಂಘ ಸಂಸ್ಥೆಗಳ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ನುಡಿದರು.

ಅವರು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀನಿವಾಸ್ ಕಾಲೇಜು ಸಮೂಹ ವಿದ್ಯಾ ಸಂಸ್ಥೆ ಮುಕ್ಕ ಹಾಗೂ ಸುರತ್ಕಲ್ ಪೊಲೀಸ್ ಠಾಣೆ ಮತ್ತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಜಂಟಿ ಸಹಯೋಗದೊಂದಿಗೆ ಮುಕ್ಕದಿಂದ ಬೈಕಂಪಾಡಿಯ ತನಕದ ರಾಷ್ಟ್ರೀಯ ಹೆದ್ದಾರಿ ಮತ್ತು ಬಸ್ಸು ತಂಗುದಾಣಗಳ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚತೆಗೆ ಬಹಳಷ್ಟು ಆದ್ಯತೆ ನೀಡುವ ಸಲುವಾಗಿ ಸ್ವಚ್ಛ ಸುರತ್ಕಲ್ ಅಗಬೇಕೆಂಬ ಉದ್ದೇಶದಿಂದ ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಇತರ ಸಂಸ್ಥೆಗಳನ್ನು ಸೇರಿಸಿಕೊಂಡು ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರಲ್ಲದೆ ಮುಂದೆ ಸುರತ್ಕಲ್ ವ್ಯಾಪ್ತಿಯ ಎಲ್ಲಾ ಬಸ್ ತಂಗುದಾಣಗಳನ್ನು ಸ್ವಚ್ಚಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷರಾದ ಮನೋಹರ ಶೆಟ್ಟಿ ಸೂರಿಂಜೆ, ಉಪಾಧ್ಯಕ್ಷ ನಾಗರಾಜ್ ಕಡಂಬೋಡಿ, ಕಾರ್ಯದರ್ಶಿ ಕಿರಣ್ ಅಚಾರ್ಯ , ಶ್ರೀನಿವಾಸ ಕಾಲೇಜಿನ ಪ್ರೋ ಆನಂದ ಮುಂತಾದವರು ಉಪಸ್ಥಿತರಿದ್ದರು.