ಸುರತ್ಕಲ್: ಹೊಸಬೆಟ್ಟು ಪರಿಸರದ ಗ್ಯಾರೇಜ್ ಒಂದರ ವಾಹನಗಳ ಬಿಡಿಭಾಗಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಮಾಡಿದ ಬಿಡಿಭಾಗಗಳು ಹಾಗೂ ಕೃತ್ಯಕ್ಕೆ ಬಳಸಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 14ರಂದು ರಾತ್ರಿ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿ ಪಕ್ಕದ ‘ಫ್ರೆಂಡ್ಸ್ ಗ್ಯಾರೇಜ್’ ಆವರಣದಲ್ಲಿ ದುರಸ್ತಿಗಾಗಿ ಎರಡು ಘನ ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ವಾಹನಗಳ ಬಿಡಿಭಾಗಗಳನ್ನು ಕಳವು ಮಾಡಿದ್ದ ಆರೋಪಿ, ತನ್ನ ಲಾರಿಯಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಗ್ಯಾರೇಜ್ ಮಾಲೀಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ಕೈಗೊಂಡ ಪೊಲೀಸರು ರಾಜಸ್ಥಾನದ ಜೋಧ್‌ಪುರ ಮೂಲದ, ಸದ್ಯ ಬೆಂಗಳೂರಿನ ಬನಶಂಕರಿ ನಿವಾಸಿಯಾಗಿರುವ ಮುಖೇಶ್ ದಾಸ್ (46) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಯಿಂದ 96,000 ರೂ. ಮೌಲ್ಯದ ಬಿಡಿಭಾಗಗಳು ಹಾಗೂ ಕೃತ್ಯಕ್ಕೆ ಬಳಸಿದ 15 ಲಕ್ಷ ರೂ. ಮೌಲ್ಯದ ಈಚರ್ ಲಾರಿಯನ್ನು (KA-02-AM-2335) ಜಪ್ತಿ ಮಾಡಲಾಗಿದೆ. ಒಟ್ಟು 15,96,000 ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

View this post on Instagram

A post shared by News Karnataka (@newskarnataka)