ಮಂಗಳೂರು : ಯಶ್ಪಾಲ್ ಸುವರ್ಣ ತಲೆಯಲ್ಲಿ ಡ್ರಗ್ ಗಿಂತ ದೊಡ್ಡ ಅಮಲು ಹರಡಿದೆ. ಬಾಬರಿ ಮಸೀದಿಯಂತೆ ರಾಹುಲ್ ಗಾಂಧಿ ಕುಟುಂಬವನ್ನು ಧ್ಬಂಸ ಮಾಡುತ್ತೇನೆಂದು ಹೇಳಿದ್ದಾನೆ. ಧ್ವಂಸ ಬಿಡು, ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತನನ್ನು ಮುಟ್ಟಿ ನೋಡು, ಈ ಜಿಲ್ಲೆಯಲ್ಲಿ ಏನಾಗುತ್ತದೆಂದು ನೋಡು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶ್ಪಾಲ್ ಸುವರ್ಣನ ಪ್ರತಿಯೊಂದು ಹೇಳಿಕೆ ಕಾಂಗ್ರೆಸ್ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನೋವಾಗಿದೆ. ರಾಹುಲ್ ಗಾಂಧಿ ಡ್ರಗ್ ಎಡಿಕ್ಟ್ ಎನ್ನುವ ಪುರಾವೆ ಇವರ ಬಳಿ ಇದೆಯೇ? ರಾಜಕೀಯದಲ್ಲಿ ಟೀಕೆ ಇದ್ದದ್ದೇ. ಹಿಂದೆ ಕಾಂಗ್ರೆಸ್ ಮುಕ್ತ ಎಂದು ಹೇಳಿದ್ದರು. ಅದರೆ ಡ್ರಗ್ ಎಡಿಕ್ಟ್ ಎನ್ನುವುದು, ಧ್ವಂಸ ಮಾಡುತ್ತೇನೆಂದು ಹೇಳುವುದು ಟೀಕೆಯಲ್ಲ, ಅದು ವೈಯಕ್ತಿಕ ದ್ವೇಷ. ಕುಟುಂಬ ನಾಶ ಮಾಡುತ್ತೇನೆ ಎನ್ನುವ ಮಾತು ಯಾರೇ ಹೇಳಿದರೂ ತಪ್ಪು ಎಂದು ರೈ ಪ್ರತಿಪಾದಿಸಿದರು.
ಮತೀಯ ಭಾವನೆಯನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಹಿನ್ನಡೆ ಆಗುತ್ತಿರುವ ಸಂದರ್ಭದಲ್ಲಿ ಇವರು ಹೇಳಿಕೆಗಳಿಗೆ ಮೊರೆ ಹೋಗಿದ್ದಾರೆ, ಚಿಕ್ಕಮಗಳೂರು ಶಾಸಕರೂ ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ. ಅವರು ಬುದ್ಧಿವಂತರಾಗಿದ್ದಾರೆನ್ನುವ ಭಾವನೆ ಇರಬಹುದು, ಆದರೆ ನಾವು ದಡ್ಡರೆನ್ನುವ ಭಾವನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಡ.ಯಶ್ಪಾಲ್ ಅವರ ಶಾಸಕ ಸ್ಥಾನ ರದ್ದುಪಡಿಸಬೇಕು, ತಕ್ಷಣ ಬಂಧಿಸಬೇಕೆಂದು ರೈ ಒತ್ತಾಯಿಸಿದ್ದಾರೆ.
ರಕ್ಷಣೆಗಾಗಿ ಮನೆಯಲ್ಲಿ ಕತ್ತಿ ಇಡಿ, ತಲ್ವಾರು ಇಡಿ ಎಂದು ಕಾಂಗ್ರೆಸ್ ನ ಯಾರೂ ಹೇಳುವುದಿಲ್ಲ. ಇಂಥ ಹೇಳಿಕೆಗಳು ಸಂವಿಧಾನದ ಮೇಲೆ ವಿಶ್ವಾಸ. ಕಾನೂನಿನ ಮೇಲೆ ನಂಬಿಕೆ ಇಲ್ಲದವರಿಂದ ಮಾತ್ರ ಬರುತ್ತದೆ ಎಂದು ರೈ ಆಕ್ರೋಶ ವ್ಯಕ್ತಪಡಿಸಿದರು.

