ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಗಿ ಶ್ರೀ ರಾಘವೇಂದ್ರ ಎಸ್ ಭಟ್ ಅವರು ಇಂದು ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಇಂದು ನಾನು ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನ ಎಂಡಿ ಹಾಗೂ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ಅಪಾರ ಸಂತೋಷ ಹಾಗೂ ಹೆಮ್ಮೆ ಇದೆ. ಈ ಬ್ಯಾಂಕಿನಲ್ಲಿ 1981 ರಲ್ಲಿ ಕ್ಲರ್ಕ್ ಹುದ್ದೆಯಿಂದ ಆರಂಭಿಸಿ, ಚೀಫ್ ಜನರಲ್ ಮ್ಯಾನೇಜರ್ ಹುದ್ದೆಯ ತನಕ 38 ವರ್ಷಗಳ ಕಾಲ ನನ್ನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ.
ಈಗ ಈ ಪ್ರತಿಷ್ಠಿತ ಸಂಸ್ಥೆಗೆ ಮತ್ತೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಎಂಡಿ ಹಾಗೂ ಸಿಇಓ) ಸೇವೆಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ವೃತ್ತಿ ಜೀವನದ ಒಂದು ವಿಶೇಷ ಘಟ್ಟವಾಗಿದೆ.
ಮಂಗಳೂರಿನಲ್ಲಿ 1924 ರಲ್ಲಿ ಸ್ಥಾಪಿತಗೊಂಡ ಕರ್ಣಾಟಕ ಬ್ಯಾಂಕ್, 101 ವರ್ಷಗಳ ಶ್ರೀಮಂತ ಇತಿಹಾಸ ಹಾಗೂ ಭದ್ರ ಬುನಾದಿಯನ್ನು ಹೊಂದಿದ್ದು, ಕೃಷಿ, ಎಂಎಸ್‌ಎಂಇಗಳು ಮತ್ತು ಇತರ ಆದ್ಯತಾವಲಯಗಳಿಗೆ ಬೆಂಬಲ ನೀಡುವ ಮಹತ್ವಾಕಾಂಕ್ಷೆಯುಳ್ಳ ದೃಷ್ಟಿಕೋನದಿಂದ ಅಂದು ಆರಂಭವಾಯಿತು ಮತ್ತು ಈ ಸಾಮಾಜಿಕ ಬದ್ಧತೆಯನ್ನು ಕರ್ಣಾಟಕ ಬ್ಯಾಂಕ್ ಈಗಲೂ ಮುಂದುವರೆಸಿಕೊಂಡು ಬರುತ್ತಿದೆ.
ಬ್ಯಾಂಕಿನ ಒಂದು ಘಟ್ಟದಲ್ಲಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಧೀರತೆ, ಕಾರ್ಯತತ್ಪರತೆ, ಸಮಾಜಮುಖಿ ಕೆ.ಎಸ್.ಎನ್. ಅಡಿಗರ ಚಟುವಟಿಕೆಗಳಿಂದಾಗಿ ಆಕಾಲದಲ್ಲಿ ಇದನ್ನು ಜನಸಾಮಾನ್ಯರು ‘ಅಡಿಗರ ಬ್ಯಾಂಕ್’ ಎಂದು ಕರೆಯುತ್ತಿದ್ದುದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬ್ಯಾಂಕಿನ ಮೇಲಿನ ಪ್ರೀತಿಯಿಂದ ಇಲ್ಲಿ ಪ್ರತಿಯೊಬ್ಬ ನೌಕರರೂ ಸೇವೆ ಸಲ್ಲಿಸುತ್ತಾರೆ. ಇದರಿಂದಾಗಿ ಕರ್ಣಾಟಕ ಬ್ಯಾಂಕ್ 101 ವರ್ಷಗಳ ಸುದೀರ್ಘ ಪ್ರಯಾಣ ಕಾಣುವಂತಾಗಿದೆ.
ಇದು ಬ್ಯಾಂಕಿನ ಮೌಲ್ಯಗಳ ಆಧಾರಿತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಬ್ಯಾಂಕ್ ನಿರಂತರವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮಂಗಳೂರಿನಲ್ಲಿ ಸ್ಥಾಪಿತಗೊಂಡ ಬ್ಯಾಂಕ್ ಇಂದು ಭಾರತದಾದ್ಯಂತ ವ್ಯಾಪಿಸಿರುವ ಪ್ರಮುಖ ಶೆಡ್ಯೂಲ್ಡ್ ಕಮರ್ಶಿಯಲ್ ಬ್ಯಾಂಕ್ ಆಗಿ ಬ್ಯಾಂಕಿಂಗ್ ರಂಗದಲ್ಲಿ ಗುರುತಿಸಿಕೊಳ್ಳುತ್ತಿದೆ.
ಕರ್ಣಾಟಕ ಬ್ಯಾಂಕ್‌ನ ಅತ್ಯಂತ ಉಲ್ಲೇಖನೀಯ ಅಂಶವೆಂದರೆ ಅದರ ನಿರಂತರ ಲಾಭದ ದಾಖಲೆ. 1924ರಲ್ಲಿ ಸ್ಥಾಪನೆಯಾದಂದಿನಿಂದ ಹಿಡಿದು, ಪ್ರತಿ 외 ಸಂಸ್ಥೆ ಲಾಭದಾಯಕವಾಗಿದ್ದು, ಶೇರುದಾರರಿಗೆ ಡಿವಿಡೆಂಡ್ ವಿತರಿಸುತ್ತಲೇ ಬಂದಿದೆ. ಇದು ಭಾರತದಲ್ಲಿ ಕೆಲವು ಸಂಸ್ಥೆಗಳಿಗೆ ಮಾತ್ರ ಸಿಕ್ಕಿರುವ ಗೌರವ. ಅದರಲ್ಲಿ ನಮ್ಮ ಕರ್ಣಾಟಕ ಬ್ಯಾಂಕ್ ಕೂಡಾ ಒಂದು ಎನ್ನುವುದು ನಮ್ಮ ಹೆಮ್ಮೆ.
ಈ ಮಹಾನ್ ಸಂಸ್ಥೆಗೆ ಮತ್ತೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಈ ಹೊಸ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ, ಕರ್ಣಾಟಕ ಬ್ಯಾಂಕ್‌ನ ಅಭಿವೃದ್ಧಿಯ ಪಯಣವನ್ನು ಮತ್ತಷ್ಟು ಬಲಪಡಿಸಲು ನಮ್ಮ ಎಲ್ಲಾ ಸಹೋದ್ಯೋಗಿಗಳ ಸಹಕಾರ ಮತ್ತು ಸಹಭಾಗಿತ್ವವನ್ನು ಮನಃಪೂರ್ವಕವಾಗಿ ವಿನಂತಿಸುತ್ತೇನೆ. ಸಹೋದ್ಯೋಗಿಳೆಲ್ಲರೂ ಒಂದಾಗಿ ಈ ಬ್ಯಾಂಕ್‌ನ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿ, ಇನ್ನಷ್ಟು ಉತ್ತುಂಗಕ್ಕೆ ತಲುಪಿಸಬೇಕೆಂಬುದೇ ನನ್ನ ಮಹದಾಸೆ.
ಈ ಸಂಸ್ಥೆಯ ಎಂಡಿ ಹಾಗೂ ಸಿಇಓ ಆಗಿ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿ, ಬೆಂಬಲಿಸುತ್ತಿರುವ ನಿರ್ದೆಶಕರ ಮಂಡಳಿಗೆ ನಾನು ಹೃತೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕರ್ಣಾಟಕ ಬ್ಯಾಂಕ್‌ನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಆದರಣೀಯ ಗ್ರಾಹಕರು, ಠೇವಣಿದಾರರು ಮತ್ತು ಶೇರುದಾರರು ನಮ್ಮ ಬ್ಯಾಂಕಿನ ಜೊತೆ ಸದಾ ನಿಲ್ಲುತ್ತೀರಿ ಎಂದು ನಿರೀಕ್ಷಿಸುತ್ತಿದ್ದೇನೆ.
ಗ್ರಾಹಕಸ್ನೇಹಿ ತಂತ್ರಜ್ಞಾನಗಳ ಸಮರ್ಪಕ ಬಳಕೆ, ನಗುಮೊಗದ ದಕ್ಷ ಉದ್ಯೋಗಿಗಳು ಆಡಳಿತಮಂಡಳಿಯಿಂದ ಕೂಡಿದ ಕರ್ಣಾಟಕ ಬ್ಯಾಂಕ್ ಸದಾ ಬಲಿಷ್ಠವಾಗಿದ್ದು, ಗ್ರಾಹಕರ ಸೇವೆಗೆ ಸದಾ ಬದ್ಧವಾಗಿದೆ. ಹಾಗೂ ಉತ್ತಮ
ಸಾಮಾಜಿಕ ಸೇವೆಗೆ ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಗಣನೀಯ ಹಾಗೂ ಶ್ಲಾಘನೀಯ. ಮಾಧ್ಯಮಗಳ ಕರ್ತವ್ಯತತ್ಪರತೆಗೆ, ಅಭಿನಂದನೆಗಳು. ಕರ್ಣಾಟಕ ಬ್ಯಾಂಕ್‌ನ ಬೆಳವಣಿಗೆಯಲ್ಲಿ ಮಾಧ್ಯಮಗಳು ನೀಡಿದ ಬೆಂಬಲವನ್ನು ನಾನು ಸದಾ ಸ್ಮರಿಸುತ್ತೇನೆ ಹಾಗೂ ಮುಂದೆಯೂ ಮಾಧ್ಯಮಗಳ ಸ್ನೇಹಪೂರ್ವಕ ವಿಶ್ವಾಸವನ್ನು ಬಯಸುತ್ತೇನೆ” ಎಂದರು.

