ಬಜ್ಪೆ: ಇಲ್ಲಿನ ಮಂಜನಕಟ್ಟೆಯಲ್ಲಿ ಖಾಸಗಿ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಿರುವ ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದರೂ ಅಧಿಕಾರಿಗಳು ಕ್ರಮವಹಿಸಿಲ್ಲ ಎಂದು ಆರೋಪಿಸಿ ಜಮೀನು ಮಾಲಕರು ರಸ್ತೆಗೆ ತಂತಿಬೇಲಿ ಹಾಕಿರುವ ಘಟನೆ ಬುಧವಾರ ವರದಿಯಾಗಿದೆ.
ಕಿನ್ನಿಗೋಳಿ- ನಿಡ್ಡೋಡಿ- ಗಂಜಿಮಠ – ಮಂಗಳೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಮಂಜನಕಟ್ಟೆ ನಿವಾಸಿ ಸಿಸಿಲಿಯಾ ಅವರು ಹೊರದೇಶದಲ್ಲಿ ಸಂದರ್ಭ ಅವರ ಖಾಸಗಿ ಜಮೀನಿನಲ್ಲಿ ಯಾವುದೇ ಮಾಹಿತಿ ನೀಡದೆ ಪಿಡ್ಲ್ಯೂಡಿ ಇಲಾಖೆ 2008ರಲ್ಲಿ ರಸ್ತೆ ನಿರ್ಮಾಣ ಮಾಡಿದೆ.
ಪಿಡ್ಲ್ಯೂಡಿ ಇಲಾಖೆಯ ಅಕ್ರಮ ಪ್ರವೇಶ ಮಾಡಿ ಮಾಹಿತಿಯೂ ನೀಡದೆ, ಪರಿಹಾರವನ್ನೂ ನೀಡದೆ ಹೆದ್ದಾರಿ ನಿರ್ಮಾಣ ಮಾಡಿರುವ ಕುರಿತು ಸಿಸಿಲಿಯಾ ಅವರು 2014ರಲ್ಲಿ ಕಂದಾಯ ಇಲಾಖೆ, ತಹಶೀಲ್ದಾರ್ ಮತ್ತು ಪಿಡ್ಲ್ಯೂಡಿ ಇಲಾಖೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ- ವಿವಾದ ಆಲಿಸಿದ್ದ ನ್ಯಾಯಾಲಯ ಸಿಸಿಲಿಯಾ ಅವರ ನಿವೇಶನಕ್ಕೆ ಸಮನಾಗಿರುವ ನಿವೇಶನ ನೀಡಬೇಕು ಅಥವಾ ರಸ್ತೆ ತೆರವು ಮಾಡಿ ಅವರ ಸ್ವಂತ ನಿವೇಶನ ನೀಡಬೇಕೆಂದು 2017ರಲ್ಲೇ ತೀರ್ಪು ನೀಡಿತ್ತು.
ಆದರೆ, ನ್ಯಾಯಾಲಯದ ತೀರ್ಪು ಉಲ್ಲಂಘಿಸುತ್ತಲೇ ಬಂದಿದ್ದ ಪಿಡ್ಲ್ಯೂಡಿ ಇಲಾಖೆ, ತಹಶೀಲ್ದಾರ್, ಮೊದಲಾದವರಿದ್ದ ಪ್ರಕರಣದ ಎದುರು ಕಕ್ಷಿಗಳು ಈ ವರೆಗೂ ಯಾವುದೇ ಬದಲಿ ವ್ಯವಸ್ಥೆಯಾಗಲೀ ಅಥವಾ ನಿರ್ಮಾಣಗೊಂಡಿರುವ ರಸ್ತೆಯನ್ನು ತೆರವು ಮಾಡಿ ಸಿಸಿಲಿಯಾ ಅವರಿಗೆ ನೀಡುವ ಗೋಜಿಗೇ ಹೋಗಿಲ್ಲ. ಹಾಗಾಗಿ ಸಿಸಿಲಿಯಾ ಅವರು ನ್ಯಾಯಾಲಯದ ಆದೇಶದಂತೆ ಸೆ.24ರ ಬುಧವಾರ ನ್ಯಾಯಾಲಯದ ಅಮೀನರಾದ ಶಿವರಾಮ ರೈ ಮತ್ತು ದೀಪಕ್ ಅವರ ವಕೀಲರಾದ ಪ್ರಜ್ವಲ್ ಡಿಸೋಜಾ ಮತ್ತು ಜೋವಿಯಲ್ ಕ್ರಾಸ್ತಾ ಅವರ ಸಮ್ಮುಖದಲ್ಲೇ ತಮ್ಮ ನಿವೇಶನದ ಗಡಿ ಗುರುತಿಸಿ ರಸ್ತೆ ಅಗೆಯುವ ಕಾರ್ಯಕ್ಕೆ ಮುಂದಾಗಿದ್ದರು.
ಈ ವೇಳೆ ನೂರಾರು ವಾಹನಗಳು ಸಾಲುಗಟ್ಟಿ ರಾಜ್ಯ ಹೆದ್ದಾರಿಯಲ್ಲಿ ನಿಂತುಕೊಂಡಿದ್ದು, ಸಾರ್ವಜನಿಕರು ಕಂದಾಯ ಇಲಾಖೆ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಅಗೆಯುತ್ತಿರುವ ಮತ್ತು ಜನರ ಆಕ್ರೋಶದ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮುಚ್ಚೂರು ಗ್ರಾಮಪಂಚಾಯತ್ ಅಧ್ಯಕ್ಷ ರು, ಕಂದಾಯ ನಿರೀಕ್ಷಕ ಪೂರ್ಣಚಂದ್ರ ಹಾಗೂ ಉಪ ತಹಶೀಲ್ದಾರ್ ಸ್ಟೀಫನ್ ಅವರು, ಸಿಸಿಲಿಯಾ ಅವರ ಅಳಿಯ ಆಂಡ್ರಿ ಡಿ. ಆಲ್ಮೆಡಾ ಮತ್ತು ನ್ಯಾಯಾಲಯದ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಿದ್ದಂತೆ ಆಕ್ರೋಶಿತರಾದ ಸಾರ್ವಜನಿಕರು, ಉಪ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಸಾರ್ವಜನಿಕರು ಬೆಳಗ್ಗೆ 10ರಿಂದ ಸಂಜೆವರೆಗೂ ರಸ್ತೆಯಲ್ಲೇ ನಿಲ್ಲುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಜಮೀನು ಮಾಲಕರೊಂದಿಗೆ ಶೀಘ್ರ ಒಪ್ಪಂದಕ್ಕೆ ಬರಬೇಕು. ಈ ಭಾಗದಲ್ಲಿ ಒಂದೇ ರಸ್ತೆ ಇದ್ದು ಪರ್ಯಾಯ ರಸ್ತೆ ಇಲ್ಲದಿರುವ ಕಾರಣ ರಸ್ತೆ ಅಗೆಯಲು ಅವಕಾಶ ನೀಡಬಾರದು ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.
ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಲೇ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಯ ಗಮನಕ್ಕೆ ತಂದರು, ಅವರ ನಿರ್ದೇಶನದಂತೆ ಸ್ಥಳಕ್ಕೆ ಬಂದ ಪಿಡ್ಲ್ಯೂಡಿ ಇಂಜಿನಿಯರ್ ಹೇಮಂತ್ ಅವರು ಸಂತ್ರಸ್ತ ಆಂಡ್ರಿ ಡಿ. ಆಲ್ಮೆಡಾ, ನ್ಯಾಯಾಲಯದ ಅಮೀನರು ಹಾಗೂ ಸಂತ್ರಸ್ತರ ಪರ ವಕೀಲರೊಂದಿಗೆ ಮಾತುಕತೆ ನಡೆಸಿ, ಸಂಜೆಯ ಒಳಗಾಗಿ ಪ್ರಕರಣ ಇತ್ಯರ್ಥಮಾಡಿಸುವುದಾಗಿ ಜಿಲ್ಲಾಧಿಕಾರಿ ಕಚೇರಿಗೆ ಕರೆದೊಯ್ದರು. ಪಿಡ್ಲ್ಯೂಡಿ ಇಂಜಿನಿಯರ್ ಹೇಮಂತ್ ಅವರ ಮನವಿಯ ಮೇರಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಜ್ಯ ಹೆದ್ದಾರಿ ಬಂದ್ ನಡೆದ ಪರಿಣಾಮ, ಕಿನ್ನಿಗೋಳಿ – ನಿಡ್ಡೋಡಿ- ಗಂಜಿಮಠ- ಮಂಗಳೂರು ಸಂಚರಿಸುವ ವಾಹನಗಳು, ಬಸ್ ಗಳು, ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಯಿತು. ಸ್ಥಳದಲ್ಲಿ ಬಜ್ಪೆ ಪೊಲೀಸರು ಭದ್ರತೆ ಕೈಗೊಂಡಿದ್ದರು.
ಜಿಲ್ಲಾಧಿಕಾರಿ ಕಚೇರಿಯಿಂದಲೂ ನ್ಯಾಯಾಲಯದ ಆದೇಶ ಉಲ್ಲಂಘನೆ : ಆರೋಪ
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರ ಅನುಪಸ್ಥಿತಿಯಲ್ಲಿ ಸಂತ್ರಸ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಕಡತ ಪರಿಶೀಲಿಸಿ ಬಳಿಕ ನಿರ್ಧಾರಕ್ಕೆ ಬರಲಾಗುವುದು, ನಮಗೆ ಇನ್ನೂ ಸಮಯಾವಕಾಶಬೇಕೆಂದು ಎಂದು ನ್ಯಾಯಾಲಯದ ಆದೇಶವನ್ನೂ ಲೆಕ್ಕಿಸದೇ ಮಾತನಾಡಿದ್ದಾರೆ ಎಂದು ಸಂತ್ರಸ್ತರ ಪರ ವಕೀಲರಾದ ಪ್ರದೀಪ್ ಡಿಸೋಜಾ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ನ್ಯಾಯಾಲಯದ ಆದೇಶದಂತೆ ನಮ್ಮ ಕಕ್ಷಿದಾರರು ಅವರ ಸರ್ವೇ ನಂಬರ್ ನಲ್ಲಿ ಬರುವ ನಿವೇಶನ ಅಗೆದು ಬೇಲಿ ಹಾಕಲಿದ್ದೇವೆ. ಪ್ರಕರಣ ಸಂಪೂರ್ಣ ಇತ್ಯರ್ಥವಾದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ವಕೀಲರಾದ ಪ್ರಜ್ವಲ್ ಡಿಸೋಜಾ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಪ್ರಕರಣ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ ಪಿಡ್ಲ್ಯೂಡಿ ಇಂಜಿನಿಯರ್ ಹೇಮಂತ್, ಎಇ ಪ್ರೀತಮ್ ಇದ್ದರು ಎಂದು ಅವರು ಹೇಳಿದ್ದಾರೆ.
ರಾಜ್ಯ ಹೆದ್ದಾರಿ ಅಗೆಯಲು ಹೇಳಿದ ತಹಶೀಲ್ದಾರ್:
ಘಟನಾ ಸ್ಥಳಕ್ಕೆ ಬಂದ ಉಪ ತಹಶೀಲ್ದಾರ್ ಸ್ಟೀಫನ್ ಅವರು ದೂರವಾಣಿ ಮೂಲಕ ತಹಶೀಲ್ದಾರ್ ಗೆ ಮಾಹಿತಿ ನೀಡಿದರು. ಬಳಿಕ ಸಂತ್ರಸ್ತರ ಪರ ವಕೀಲರಿಗೆ ದೂರವಾಣಿ ಮಾಹಿತಿ ನೀಡುವಂತೆ ಹೇಳಿದ್ದಾರೆ. ಆಗ ವಕೀಲರು ರಸ್ತೆ ತೆರವು ಮಾಡಬಹುದೆಂದು ನ್ಯಾಯಾಲಯದ ಆದೇಶವಿಎ ಎಂದು ಅವರಗ ಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ನ್ಯಾಯಾಲಯದ ಆದೇಶವಿದ್ದರೆ ರಸ್ತೆ ತೆರವು ಮಾಡಿ ಎಂದು ಹೇಳುತ್ತಿದ್ದಂತೆ ರಸ್ತೆ ಅಗೆಯಲು ಮುಂದಾದರು. ಈ ವೇಳೆ ಸಾರ್ವಜನಿಕರು ರಸ್ತೆ ಅಗೆಯದಂತೆ ಮನವಿ ಮಾಡಿದ ಘಟನೆಯೂ ನಡೆಯಿತು.
2008ರಲ್ಲಿ ರಸ್ತೆ ಮಾಡುವ ಉದ್ದೇಶದಿಂದ ನಮ್ಮ ಜಮೀನು, ಶೆಡ್ ಮತ್ತು ತೆಂಗಿನಮರಗಳನ್ನು ಕಡಿದುಹಾಕಿ ನಮಗೆ ಯಾವುದೇ ಮಾಹಿತಿ ನೀಡದೆ ರಾಜ್ಯ ಹೆದ್ದಾರಿ ಮಾಡಿದ್ದಾರೆ. ಈ ಕುರಿತು ನ್ಯಾಯಾಲಯಕ್ಕೆ ದೂರು ನೀಡಿದ್ದೆ. ನ್ಯಾಯಾಲಯ ನಮಗೆ ಸೂಕ್ತ ವ್ಯವಸ್ಥೆ ನೀಡಬೇಕೆಂದು 2018ರಲ್ಲಿ ತೀರ್ಪು ನೀಡಿತ್ತು. ಆದರೂ, ಅಧಿಕಾರಿಗಳು ಅವರ ನಿರ್ಲಕ್ಷ್ಯದಿಂದಾಗಿ ಕಳೆದ 10ವರ್ಷಗಳಿಂದಲೂ ನನ್ನನ್ನು ಕಚೇರಿಗಳಿಂದ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ. ನಾನು ಹೃದ್ರೋಗದಸಮಸ್ಯೆಯಿಂದ ಬಳಲುತ್ತಿದ್ದೇನೆ. ಇನ್ನು ನನ್ನಿಂದ ಓಡಾಡಲು ಸಾಧ್ಯವಿಲ್ಲ. ಹಾಗಾಗಿ ಮತ್ತೆ ನ್ಯಾಯಾಲಯದ ಮೊರೆಹೋಗಿ ಅದರ ಮುಖಾಂತರವೇ ನಮ್ಮ ನಿವೇಶನವನ್ನು ಪಡೆದುಕೊಳ್ಳುವ ನಿರ್ಧಾರ ಮಾಡಲಾಗಿದೆ. ನಮ್ಮ ಜಮೀನನ್ನು ಅಗೆದು ಬೇಲೆ ಹಾಕಲು ನಿರ್ಧರಿಸಿದ್ದೇವೆ ಆ್ಯಂಡ್ರಿ ಡಿ. ಆಲ್ಮೆಡಾ, ಸಂತ್ರಸ್ತ ಹೇಳಿದರು.

