ಮಂಗಳೂರು : ಸಾಹಿತ ಲೋಕದ ಅಮೂಲ್ಯ ರತ್ನ, ಸರಸ್ವತಿ ಸಮ್ಮಾನ್ ಪುರಸ್ಕೃತ, ಪದ್ಮಭೂಷಣ ಡಾ.ಎಸ್.ಎಲ್. ಭೈರಪ್ಪನವರಿಗೆ ವಿವಿಧ ಸಂಘ ಸಂಸ್ಥೆಗಳು, ಗಣ್ಯರ ಸಹಯೋಗದೊಂದಿಗೆ ಸಾರ್ವಜನಿಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಮಂಗಳೂರಿನ ಕೆನರಾ ಹೈಸ್ಕೂಲಿನ ಭುವನೇಂದ್ರ ಸಭಾಭವನದಲ್ಲಿ ಶುಕ್ರವಾರದಂದು (ಸೆಪ್ಟೆಂಬರ್ 26) ಡಾ. ಎಸ್. ಎಲ್. ಭೈರಪ್ಪನವರಿಗೆ ಗಾನನಮನ, ವೇದನಮನ, ನುಡಿನಮನ, ರಾಷ್ಟ್ರನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಎಸ್. ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ ಎನ್ನುವುದಕ್ಕಿಂತ ಸಮಾರಾಧನೆ ಎಂದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ಹೇಳುತ್ತಾ ಮಂಗಳೂರು ಜೊತೆಗೆ ಇದ್ದ ಬಾಂಧವ್ಯವನ್ನು, ಸಾಹಿತ್ಯರಚನೆಗೆ ಇಲ್ಲಿನ ಪರಿಸರದ ಸೊಬಗು ಎಷ್ಟು ಸೂಕ್ತವಾಗಿದೆ ಎಂದು ಭೈರಪ್ಪನವರನ್ನು ಹೇಳಿದ್ದನ್ನು ಸ್ಮರಿಸಿದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ ಅವರು ತಮ್ಮ ಹಾಗೂ ಭೈರಪ್ಪನವರ ಮೊದಲ ಭೇಟಿ ಹಾಗೂ ನಂತರದ ಘಟನೆಗಳನ್ನು ಮೆಲುಕು ಹಾಕಿದರು. ಶಾಸಕ ವೇದವ್ಯಾಸ ಕಾಮತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ| ತುಕಾರಾಂ ಪೂಜಾರಿ,
ವಿಧಾನಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಸ್ಕೃತ ಪಂಡಿತರಾದ ವಿಶ್ವಾಸ್, ವಿಶ್ವಹಿಂದೂ ಪರಿಷತ್ ಮುಖಂಡರಾದ ಎಂ ಬಿ ಪುರಾಣಿಕ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಆಡಳಿತ ಮಂಡಳಿಯ ಮಂಗಲ್ಪಾಡಿ ನರೇಶ್ ಶೆಣೈ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ರಚನಾ ಕಾಮತ್, ಪ್ರತಿಭಾ ರೈ, ಅನನ್ಯ ನಾರಾಯಣ್ ಗಾನನಮನ ಸಲ್ಲಿಸಿದರು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಧಾನ ಅರ್ಚಕರಲ್ಲಿ ಒಬ್ಬರಾದ ವೇದಮೂರ್ತಿ ಡಾ| ಕದ್ರಿ ಪ್ರಭಾಕರ ಅಡಿಗ ಅವರು ವೇದನಮನ ಸಲ್ಲಿಸಿದರು.

