ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಲಮಿತಿಯೊಳಗೆ ಸಮಗ್ರ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಗೆ ಸಾರ್ವಜನಿಕ ಉದ್ಯಮಗಳ ಸಮಿತಿಯು ಶಿಫಾರಸು ಮಾಡಿದೆ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಮಂಡಲಗಳ 20 ಮಂದಿ ಶಾಸಕರನ್ನು ಒಳಗೊಂಡ ಈ ಸಮಿತಿಯು ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಧಾರದಲ್ಲಿ ನೀಡಿರುವ ವರದಿಯಲ್ಲಿ ಈ ಶಿಫಾರಸ್ಸು ಮಾಡಿದೆ ಎಂದರು.
ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ನಗರಾಭಿವೃದ್ಧಿ ಇಲಾಖೆಯು ಸರಕಾರಕ್ಕೆ ಪತ್ರೆ ಬರೆದಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನಡೆಸುವಂತೆಯೂ ತಿಳಿಸಿದೆ ಎಂದು ಐವನ್ ಡಿಸೋಜಾ ಹೇಳಿದರು.
ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ತ್ವರಿತ ನಗರೀಕರಣ ಹಾಗೂ ಸಮರ್ಪಕ ನೈರ್ಮಲ್ಯ ಮೂಲಸೌಕರ್ಯಗಳ ಅಗತ್ಯತೆ ಪರಿಗಣಿಸಿ ಗುರುತಿಸಲಾದ ಪ್ರದೇಶಗಳಲ್ಲಿ ಭೂಗತ ಒಳರಂಡಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು ಅಗತ್ಯವಾಗಿದೆ. ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಪರಿಸರ ಸಂಬಂಧಿ ಸಮಸ್ಯೆಗಳು, ಅನೈರ್ಮಲ್ಯ ಪರಿಸ್ಥಿತಿ, ಜಲಮೂಲಗಳ ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ಅನಾನುಕೂಲತೆಗಳು ಉಂಟಾಗಿವೆ.
ಕಾಮಗಾರಿಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸದಿರುವುದರಿಂದ ಸಾರ್ವಜನಿಕ ಆರೋಗ್ಯ ಸುಧಾರಣೆ, ನೀರು ನಿಲ್ಲುವ ಸಮಸ್ಯೆ ತಡೆಗಟ್ಟುವುದು, ನೈರ್ಮಲ್ಯ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸುಸ್ಥಿರ ನಗರಾಭಿವೃದ್ಧಿಗೆ ಉತ್ತೇಜನ ನೀಡುವುದು ಸಾಧ್ಯವಾಗುತ್ತದೆ ಎಂದು ಶಿಫಾರಸು ಮಾಡಿರುವ ಸಮಿತಿಯು, ಪ್ರಸಕ್ತ ಜಲ ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ರಾಜಕಾಲುವೆಗಳ ಮೂಲಕ ನದಿಗಳಿಗೆ ಹರಿಸಲಾಗುತ್ತಿದೆ. ಇದರಿಂದ ಜಲಮೂಲಗಳು ಕಲುಷಿತವಾಗುತ್ತಿದೆ.
ಈ ವಿಸ್ತೃತ ಯೋಜನೆ ತಯಾರಿಸುವಾಗ ಸಂಸ್ಕರಿಸಿದ ನೀರನ್ನು ಮರುಬಳಕೆಗೆ ಬೇಕಾಗಿರುವ ಅಗತ್ಯ ಕಾಮಗಾರಿಗಳನ್ನು ಸೇರಿಸಬೇಕು ಎಂದು ಉಲ್ಲೇಖಿಸಿದೆ. ಈಗಾಗಲೇ ಕೈಗೊಂಡ ಕಾಮಗಾರಿಗಳಲ್ಲಿ ಹಲವಾರು ನ್ಯೂನ್ಯತೆಗಳಿದ್ದು ಸಿಎಜಿಯವರು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಿ ವರದಿ ಮಾಡಿದಾದರೆ. ಹೊಸ ಸಮಗ್ರ ಯೋಜನೆಯಲ್ಲಿ ಲೋಪದೋಷಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ದುಂದು ವೆಚ್ಚ ತಡೆಯಬೇಕು. ಪ್ರಸ್ತಾವಿತ ಸಮಗ್ರ ಯೋಜೆಗೆ ಸುಮಾರು 1250 ಕೋಟಿ ರೂ. ಅಗತ್ಯವಿರುವುದಾಗಿ ಪಾಲಿಕೆ ತಿಳಿಸಿದೆ. ಯೋಜನೆಗೆ ಡಿಪಿಆರ್ ತಯಾರಸಿ ಅಗತ್ಯ ಆಡಳಿತಾತ್ಮಕ ಅನುಮೋದನೆಗಳು, ಅನುದಾನ ಹಂಚಿಕೆ ಹಾಗೂ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸರಕಾರ ಕ್ರಮ ವಹಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ಐವನ್ ಡಿಸೋಜಾ ತಿಳಿಸಿದರು.
ನಗರದ ಬಹುತೇಕ ಕಡೆಗಳಲ್ಲಿ ಒಳಚರಂಡಿಯ ಅವ್ಯವಸ್ಥೆಯಿಂದಾಗಿ ಬಾವಿ ನೀರು ಕಲುಷಿತವಾಗಿದ್ದು, ಹಲವು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕೆರೆಗಳ ನೀರೂ ಕೊಳಚೆಯಾಗಿದೆ. ಈ ಬಗ್ಗೆ ಹಿಂದೆ ಪಾಲಿಕೆಯ ಪರಿಷತ್ತು ಸಭೆಯಲ್ಲಿ ಬಿಜೆಪಿ ಆಡಳಿತದ ಸಂದರ್ಭದಲ್ಲಿ ಧ್ವನಿ ಎತ್ತಿದ್ದಾಗ ಅಂದಿನ ಮೇಯರ್ ಎಲ್ಲವೂ ಸಮರ್ಪಕವಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇತ್ತೀಚೆಗೆ ಕದ್ರಿಯಲ್ಲಿ ಕಲುಷಿತ ನೀರು ಪೂರೈಕೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದಾಗ ಬಿಜೆಪಿಯ ಶಾಸಕರು ಅದು ಕಾಂಗ್ರೆಸ್ ಆಡಳಿತದ ನಗರ ಪಾಲಿಕೆ ಕಾರಣ ಎನ್ನುತ್ತಾರೆ.
ಕಳೆದ ಹಲವಾರು ವರ್ಷಗಳಿಂದ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆಯ ಬಗ್ಗೆ ಕಳೆದ ಎಂಟು ವರ್ಷಗಳಿಂದ ಶಾಸಕರಾಗಿರುವ ವೇದವ್ಯಾಸ ಕಾಮತ್ ಅವರು ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಈ ಬಗ್ಗೆ ಸಮಗ್ರ ಯೋಜನೆಗೆ ಕ್ರಮ ವಹಿಸಿದ್ದಾರೆಯೇ ಎಂದು ಪ್ರಶ್ನಿಸಿದ ಐವನ್ ಡಿಸೋಜಾ, ಈ ರೀತಿ ಆರೋಪ ಮಾಡುವುದರಿಂದ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಿಲ್ಲ. ನಗರದ ಒಳಚರಂಡಿಯ ಸಮಗ್ರ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದ ಅಗತ್ಯವಿದೆ. ಹಾಗಾಗಿ ರಾಜಕೀಯ ಬದಿಗಿಟ್ಟು ಸ್ಥಳೀಯ ಶಾಸಕರು, ಸಂಸದರು ಜತೆಯಾಗಿ ಪ್ರಯತ್ನಿಸಬೇಕಿದೆ ಎಂದು ಹೇಳಿದರು.

