ಮಂಗಳೂರು : ಬ್ರಹ್ಮರಕೂಟ್ಲುವಿನಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಟೋಲ್‌ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ಆ.18ರಂದು ‘ಡಿಸಿ ಕಚೇರಿ ಚಲೋ’ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005ರಲ್ಲಿ ಸುರತ್ಕಲ್–ಬಿ.ಸಿ.ರೋಡ್ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು, ನವಯುಗ ಕನ್ಸ್ಟ್ರಕ್ಷನ್ ಸಂಸ್ಥೆ ಎಂಟು ವರ್ಷಗಳ ಕಾಲ ಕಾಮಗಾರಿ ನಡೆಸಿತ್ತು. ಕಾಮಗಾರಿ ಸಂಪೂರ್ಣಗೊಳ್ಳುವ ಮುನ್ನವೇ ಟೋಲ್ ಸಂಗ್ರಹ ಆರಂಭಿಸಲಾಗಿದ್ದು, ಬಳಿಕ ಕಳೆದ 13 ವರ್ಷಗಳಿಂದ ನಿರಂತರವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು.

ಟೋಲ್ ಸಂಗ್ರಹ ಆರಂಭವಾದಾಗಿನಿಂದಲೇ ಎಸ್‌ಡಿಪಿಐ ಹೋರಾಟ ನಡೆಸುತ್ತಿದ್ದು, ನಿರಂತರ ಹೋರಾಟದ ಹೊರತಾಗಿಯೂ ಸಂಬಂಧಪಟ್ಟ ವ್ಯವಸ್ಥೆ ಯಾವುದೇ ಕ್ರಮ ಕೈಗೊಂಡಿಲ್ಲ. ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಪ್ರತಿನಿತ್ಯ ಗಲಾಟೆಗಳು ನಡೆಯುತ್ತಿವೆ. ಹೆದ್ದಾರಿ ಕಾಮಗಾರಿಗೆ ತಗುಲಿದ ವೆಚ್ಚಕ್ಕಿಂತ ಹಲವು ಪಟ್ಟು ಹೆಚ್ಚಿನ ಮೊತ್ತವನ್ನು ಈಗಾಗಲೇ ಟೋಲ್ ಮೂಲಕ ಸಂಗ್ರಹಿಸಲಾಗಿದೆ. ಆದರೆ, ಹೆದ್ದಾರಿ ಪ್ರಾಧಿಕಾರವು ಈ ಬಗ್ಗೆ ಸಮರ್ಪಕ ಲೆಕ್ಕ ನೀಡುತ್ತಿಲ್ಲ ಎಂದು ದೂರಿದರು.

ಜನಪ್ರತಿನಿಧಿಗಳು ಕೂಡ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಈಗಿನ ಸಂಸದರು ಕೇಂದ್ರ ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸಿಲ್ಲ ಹಾಗೂ ಲೋಕಸಭೆಯಲ್ಲೂ ಈ ಕುರಿತು ಧ್ವನಿ ಎತ್ತಿಲ್ಲ. ಎಸ್‌ಡಿಪಿಐ ವಿರುದ್ಧ ಮಾತನಾಡುವ ಸಂಸದರು ಅಕ್ರಮ ಟೋಲ್ ಸಂಗ್ರಹದ ಬಗ್ಗೆ ಮೌನವಾಗಿದ್ದಾರೆ ಎಂದು ಅನ್ವರ್ ಸಾದತ್ ಆರೋಪಿಸಿದರು.

ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಪ್ರತಿದಿನ ಲಕ್ಷಾಂತರ ರೂಪಾಯಿ ಸಂಗ್ರಹವಾಗುತ್ತಿದ್ದು, ವರ್ಷಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಸಂಗ್ರಹವಾಗಿರಬಹುದು. ಇದು ಹಗಲು ದರೋಡೆಯಂತಾಗಿದೆ. ಕೇರಳದ ಕುಂಬಳೆಯಲ್ಲಿ ನಿರ್ಮಿಸಲಾಗಿದ್ದ ಹೊಸ ಟೋಲ್‌ಗೇಟ್‌ನ್ನು ಜನಾಕ್ರೋಶಕ್ಕೆ ಮಣಿದು ತೆರವುಗೊಳಿಸಲಾಗಿದೆ. ಅಲ್ಲಿ ಸಾಧ್ಯವಾಗಿರುವುದು ದಕ್ಷಿಣ ಕನ್ನಡದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಅಕ್ರಮ ಟೋಲ್ ಸಂಗ್ರಹದಿಂದ ಶಾಸಕರು ಹಾಗೂ ಸಂಸದರಿಗೆ ಎಷ್ಟು ಹಣ ಹೋಗುತ್ತಿದೆ ಎಂಬುದೂ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಟೋಲ್ ಸಂಗ್ರಹಕ್ಕೆ ಹಲವು ನಿಯಮಗಳಿದ್ದು, ಅವುಗಳಲ್ಲಿ ಯಾವುದನ್ನೂ ಬ್ರಹ್ಮರಕೂಟ್ಲು ಟೋಲ್ ಹಾಗೂ ಹೆದ್ದಾರಿಯಲ್ಲಿ ಸಮರ್ಪಕವಾಗಿ ಪಾಲಿಸಲಾಗುತ್ತಿಲ್ಲ. ರಸ್ತೆ ವ್ಯವಸ್ಥೆ ಸಮರ್ಪಕವಾಗಿಲ್ಲದಿದ್ದರೂ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ಹೆದ್ದಾರಿ ಪ್ರಾಧಿಕಾರವು ನಿಯಮಗಳನ್ನು ಕಡೆಗಣಿಸಿ ಟೋಲ್ ಸಂಗ್ರಹಿಸುತ್ತಿದ್ದು, ಕೋಟ್ಯಂತರ ರೂಪಾಯಿ ಲೂಟಿಯಾಗುತ್ತಿದೆ ಎಂದು ಆರೋಪಿಸಿದರು.

ಟೋಲ್ ಕೇಂದ್ರದ ಸಿಬ್ಬಂದಿ ವಾಹನ ಸವಾರರೊಂದಿಗೆ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ. ಬ್ರಹ್ಮರಕೂಟ್ಲು ಟೋಲ್ ಸಂಗ್ರಹವನ್ನು ನಿಲ್ಲಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಜನಶಕ್ತಿಯ ಮುಂದೆ ಯಾವುದೇ ಸರ್ಕಾರವೂ ನಿಲ್ಲಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಆ.18ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮರಕೂಟ್ಲು ಟೋಲ್ ಕೇಂದ್ರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಯಲಿದ್ದು, ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸಲಾಗುವುದು. ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಮುಖಂಡರಾದ ಅಕ್ಬರ್ ಅಲಿ, ಅಕ್ಬರ್ ರಾಝ್ ಹಾಗೂ ಯಾಸೀನ್ ಅರ್ಕುಳ ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)