ಮಂಗಳೂರು : ರಾಜ್ಯ ಸರ್ಕಾರ ಅವೈಜ್ಞಾನಿಕ ಕ್ರಮಗಳನ್ನು ಹೇರುವ ಮೂಲಕ ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ಸ್ವಾಭಿಮಾನದ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ. ಸುಮಾರು 57 ವರ್ಷಗಳಿಂದ ನಮ್ಮ ಅಸೋಸಿಯೇಶನ್ ಹಲವಾರು ಬೇಡಿಕೆಗಳನ್ನು ಸಂಬಂಧಪಟ್ಟವರಿಗೆ ಅಹವಾಲು ನೀಡಿದ್ರೂ ಪ್ರಯೋಜನವಾಗಿಲ್ಲ.

ಈ ಹಿನ್ನೆಲೆ ದ.ಕ, ಉಡುಪಿ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಶನ್ ವತಿಯಿಂದ ಕಾವೂರು ಜಂಕ್ಷನ್ ಬಳಿ ಇರುವ ಟ್ಯಾಕ್ಸಿ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು

ಈ ಬಗ್ಗೆ ಸಂಘಟಕರು ಮಾತನಾಡಿ, ಪ್ರಸ್ತುತ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮ್ಮ ಪ್ರವಾಸಿ ವಾಹನಗಳ ಮೇಲೆ ಬಹಳಷ್ಟು ತಾರತಮ್ಯ ಹಾಗೂ ಅವೈಜ್ಞಾನಿಕ ಪಾರ್ಕಿಂಗ್ ದರಗಳನ್ನು ವಸೂಲಿ ಮಾಡುತ್ತಿದ್ದು ದುಡಿಮೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದರು.

ಸರ್ಕಾರದ ಎಲ್ಲಾ ತೆರಿಗೆಗಳನ್ನು ಪಾವತಿಸಿ ಸಂಚರಿಸುತ್ತಿರುವ ಪ್ರವಾಸಿ ವಾಹನಗಳ ಮೇಲೆ ಅನಗತ್ಯ ಕ್ರಮಗಳನ್ನು ಹೇರುತ್ತಿದ್ದು ಇನ್ನೊಂದೆಡೆ ಖಾಸಗಿ ವಾಹನಗಳಿಗೆ ಎಲ್ಲಾ ರೀತಿಯ ಸವಲತ್ತು ನೀಡಿ ಮಲತಾಯಿ ಧೋರಣೆ ಅನುಸರಿಸುತ್ತಿರೋದು ಖಂಡನೀಯ. ನಮ್ಮ ಪ್ರತಿಭಟನೆ ಯಾವುದೇ ಸರ್ಕಾರದ ವಿರುದ್ಧವಲ್ಲ. ನಮ್ಮ ಬೇಡಿಕೆಯ ಈಡೇರಿಕೆಗಾಗಿ ಈ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.