ಮಂಗಳೂರು : ಭಾರತದ ಪ್ರಧಾನಿ ನರೇಂದ್ರ ಮೋದಿ 7 ಸಲಹೆಗಳನ್ನು ದೇಶದ ಜನತೆಗೆ ನೀಡಿದ್ದಾರೆ. ಈ ಬಗ್ಗೆ ದೇಶವ್ಯಾಪಿಯಾಗಿ ಚರ್ಚೆ ನಡೆಯುತ್ತಿದೆ. ಜನರಿಗೆ ಈ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮನವರಿಕೆ ಮಾಡುವ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಟದ ಸಂಚಾಲಕ ಸಿಎ ಎಸ್ ಎಸ್ ನಾಯಕ್ ಹೇಳಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಧಾನಿ ಕರೆ ನೀಡಿರುವ ಇಂಧನ ಉಳಿತಾಯ ಮಾಡಿ, ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ, ಚಿನ್ನ ಖರೀದಿ ಮುಂದೂಡಿ ಇತ್ಯಾದಿ ಸಲಹೆಗಳನ್ನು ನೀಡಿದ್ದಾರೆ. ಭಾರತದ ಜಿಡಿಪಿ ಈಗ ಸುಮಾರು 4.15 ಟ್ರಿಲಿಯನ ಡಾಲರ್ ಮಟ್ಟ ತಲುಪಿದ್ದು, ಮುಂದಿನ ಕೆಲವು ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆಯ ಗುರಿಯತ್ತ ಸಾಗುತ್ತಿದೆ ಎಂದರು.
ಕಚ್ಚಾ ತೈಲದಿಂದ ಸುಮಾರು ಶೇಕಡಾ 85ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಇದರ ಉಳಿತಾಯದ ಮೂಲಕ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಉಳಿಸಿಕೊಳ್ಳಬಹುದಾಗಿದೆ ಎಂದರು. ಪ್ರಧಾನಿಗಳ ಮೇ 10ರ ಘೋಷಣೆ ಸಂಕಷ್ಟದ ಸೂಚನೆ ಅಲ್ಲ, ಜವಾಬ್ದಾರಿಯುತ ನಾಯಕತ್ವದ ಸಂಕೇತವಾಗಿದೆ. ಭಾರತ ಇಂದು ಸವಾಲುಗಳನ್ನು ಮಾತ್ರ ಎದುರಿಸುತ್ತಿಲ್ಲ. ಅವನ್ನು ಅವಕಾಶಗಳಾಗಿ ಪರಿವರ್ತಿಸುತ್ತದೆ ಎಂದರು. ಸಹ ಸಂಚಾಲಕ ಯೋಗೀಶ್ ಪೈ, ಸದಸ್ಯರಾದ ಕೃಷ್ಣ ಭಟ್ ಕೊಕ್ಕಡ, ರಾಜೇಶ್ ರಾವ್ ಎಂ, ಡಾ ಪ್ರೊ ಎಸ್ ಎಂ ಶಿವಪ್ರಕಾಶ್, ವಸಂತ ಶೆಟ್ಟಿ ಮೊದಲಾದವರಿದ್ದರು.

