ಮಂಗಳೂರು : ಕೂಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅವ್ಯವಸ್ಥೆ ವಿರುದ್ಧ ಸ್ಥಳೀಯ ವಾಹನ ಸವಾರರು ಹಾಗೂ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯ ಗುಂಡಿಗಳಿಗೆ ತಾತ್ಕಾಲಿಕವಾಗಿ ಮಣ್ಣು ಹಾಗೂ ಜಲ್ಲಿ ಹಾಕಿ ದುರಸ್ತಿ ಮಾಡಲಾಗುತ್ತಿದ್ದು, ಮಳೆ ಬಂದರೆ ಮತ್ತೆ ರಸ್ತೆ ಹದಗೆಡುತ್ತಿದೆ
ರಸ್ತೆಗೆ ಸಮರ್ಪಕವಾಗಿ ಡಾಂಬರೀಕರಣ ಮಾಡದೆ, ಕೇವಲ ಮಣ್ಣು ಮತ್ತು ಜಲ್ಲಿ ಹಾಕಿ ದುರಸ್ತಿ ಮಾಡಲಾಗುತ್ತಿದೆ. ಇದರಿಂದ ಮಳೆ ಬಂದಾಗ ಹಾಕಿರುವ ಜಲ್ಲಿ ಕೊಚ್ಚಿಹೋಗಿ ಮತ್ತೆ ಗುಂಡಿಗಳು ನಿರ್ಮಾಣವಾಗುತ್ತಿವೆ. ನಿನ್ನೆ ಮತ್ತು ಇಂದು ರಸ್ತೆಯ ಪರಿಸ್ಥಿತಿ ಪರಿಶೀಲಿಸಿದಾಗ, ಸ್ವಲ್ಪ ಮಟ್ಟಿಗೆ ಮಾತ್ರ ಸುಧಾರಣೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ರಸ್ತೆಯ ಗುಂಡಿಗಳಿಂದ ಆಟೋರಿಕ್ಷಾಗಳಿಗೆ ನಿರಂತರ ಹಾನಿಯಾಗುತ್ತಿದ್ದು, ವೀಲ್ ಬೇರಿಂಗ್ ಸೇರಿದಂತೆ ಹಲವು ಬಿಡಿಭಾಗಗಳ ದುರಸ್ತಿಗೆ ಚಾಲಕರು ಹಣ ಖರ್ಚು ಮಾಡಬೇಕಾಗಿದೆ. ಆದರೆ ಆಟೋ ಚಾಲಕರ ಸಮಸ್ಯೆಗಳನ್ನು ಕೇಳುವವರು ಯಾರೂ ಇಲ್ಲ ಎಂದು ಅಬ್ದುಲ್ ರಝಾಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕೂಳೂರು ರಸ್ತೆಯ ಅವ್ಯವಸ್ಥೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಸ್ತೆ ಸಂಚಾರದ ವಿಳಂಬದಿಂದ ಹಲವರು ವಿಮಾನ ತಪ್ಪಿಸಿಕೊಂಡಿರುವ ಘಟನೆಗಳೂ ನಡೆದಿವೆ ಎಂದು ಅವರು ತಿಳಿಸಿದ್ದಾರೆ.
ಸಮಸ್ಯೆಯನ್ನು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಹೀಗಾಗಿ ರಸ್ತೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅಬ್ದುಲ್ ರಝಾಕ್ ಎಚ್ಚರಿಕೆ ನೀಡಿದ್ದಾರೆ.
ಕೂಳೂರು ರಸ್ತೆಯ ಅವ್ಯವಸ್ಥೆ ಹಾಗೂ ನಿರಂತರ ಟ್ರಾಫಿಕ್ ಜಾಮ್‌ನಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರಾದ ಹರೀಶ್ ಆರೋಪಿಸಿದ್ದಾರೆ.
ಕಳೆದೊಂದು ವಾರದಿಂದ ಕೂಳೂರು ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವುದಕ್ಕೂ ಕಷ್ಟವಾಗುತ್ತಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪಾದಚಾರಿಗಳಿಗೆ ರಸ್ತೆ ದಾಟುವುದೂ ಕಷ್ಟವಾಗಿದೆ. ಇತ್ತೀಚೆಗಷ್ಟೇ ಇಲ್ಲಿ ಅಪಘಾತ ಸಂಭವಿಸಿದ್ದು, ಈ ಭಾಗದಲ್ಲಿ ಈ ಹಿಂದೆ ಸಾವು ಸೇರಿದಂತೆ ಹಲವು ಅಪಘಾತಗಳು ನಡೆದಿವೆ ಎಂದು ಹರೀಶ್ ತಿಳಿಸಿದ್ದಾರೆ.
ಹೈವೇಯಲ್ಲಿ ಸಂಚಾರ ದಟ್ಟಣೆ ಉಂಟಾಗುವುದರ ಜೊತೆಗೆ, ಟ್ರಾಫಿಕ್ ನಿರ್ವಹಣೆಯಲ್ಲಿಯೂ ಸೂಕ್ತ ವ್ಯವಸ್ಥೆ ಕಾಣಿಸುತ್ತಿಲ್ಲ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸೇರಿದಂತೆ ಹಲವು ಸಮಯಗಳಲ್ಲಿ ಗಂಟೆಗಟ್ಟಲೆ ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುತ್ತಿವೆ. ಇದರಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೂಳೂರು ರಸ್ತೆಯ ಸಮಸ್ಯೆ ಕುರಿತು ಸಂಬಂಧಪಟ್ಟ ಸಂಸದರು ಹಾಗೂ ಶಾಸಕರ ಗಮನಕ್ಕೆ ಈಗಾಗಲೇ ತರಲಾಗಿದೆ. ಆದರೆ ಸಮಸ್ಯೆ ಮುಂದುವರಿದರೆ ರಾಜಕೀಯ ಭೇದ ಮರೆತು ಸ್ಥಳೀಯರೆಲ್ಲರೂ ಒಂದಾಗಿ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಹರೀಶ್ ಎಚ್ಚರಿಕೆ ನೀಡಿದ್ದಾರೆ.
ರಸ್ತೆ ದುರಸ್ತಿ ಹಾಗೂ ಸಂಚಾರ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳನ್ನು ಒಗ್ಗೂಡಿಸಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೂಳೂರು ರಸ್ತೆಯಲ್ಲಿನ ನಿರಂತರ ಟ್ರಾಫಿಕ್ ಜಾಮ್ ಹಾಗೂ ಹದಗೆಟ್ಟ ರಸ್ತೆ ಪರಿಸ್ಥಿತಿಯಿಂದ ಬಸ್ ಚಾಲಕರು ಮತ್ತು ನಿರ್ವಾಹಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬಸ್ ಚಾಲಕ ಸಿದ್ದಿಕ್ ಹೇಳಿದ್ದಾರೆ.
ಕೂಳೂರು ಭಾಗದಲ್ಲಿ ಕೆಲವೊಮ್ಮೆ ಎರಡು-ಮೂರು ಗಂಟೆಗಳ ಕಾಲ ಮಾತ್ರವಲ್ಲದೆ, ಮೂರು-ನಾಲ್ಕು ಗಂಟೆಗಳವರೆಗೂ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದರಿಂದ ಬಸ್ ಚಾಲನೆ ಮಾಡುವುದೇ ಆತಂಕದ ಕೆಲಸವಾಗಿದೆ. ಗಂಟೆಗಟ್ಟಲೆ ತಡವಾಗಿ ಬಸ್‌ಗಳು ಸಂಚರಿಸುವುದರಿಂದ ಎದುರಿನಿಂದ ಬರುವ ವಾಹನಗಳು, ಬೈಕ್ ಸವಾರರು ಹಾಗೂ ಕುಟುಂಬ ಸಮೇತ ಪ್ರಯಾಣಿಸುವವರ ಸುರಕ್ಷತೆಯನ್ನು ಕಾಪಾಡುವುದು ಕಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಟ್ರಾಫಿಕ್ ಜಾಮ್‌ನಿಂದಾಗಿ ಈ ಭಾಗದಲ್ಲಿ ಅಪಘಾತಗಳೂ ಸಂಭವಿಸುತ್ತಿವೆ. ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಸಮಯಕ್ಕೆ ತಲುಪಲು ಸಾಧ್ಯವಾಗದೆ ವಿಮಾನ ತಪ್ಪಿಸಿಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಆಸ್ಪತ್ರೆ ಹಾಗೂ ತುರ್ತು ಸೇವೆಗಳಿಗೆ ತೆರಳುವವರಿಗೂ ಸಮಸ್ಯೆಯಾಗುತ್ತಿದೆ. ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವುದು ಕೂಡ ಕಷ್ಟವಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿರುವವರು ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವಂತಾಗಿದೆ ಎಂದು ಸಿದ್ದಿಕ್ ಹೇಳಿದ್ದಾರೆ.
ಇನ್ನು, ಬಸ್ ಸಂಚಾರದ ವೇಳೆ ಸಣ್ಣಪುಟ್ಟ ತಪ್ಪುಗಳಾದರೂ ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊಗಳು ವೈರಲ್ ಆಗುವುದರಿಂದ ಸಾರ್ವಜನಿಕರಿಂದ ಇಡೀ ಬಸ್ ಸಿಬ್ಬಂದಿಯನ್ನೇ ದೂಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅವ್ಯವಸ್ಥೆಯಿಂದ ಬಸ್ ಓಡಿಸುವುದೇ ಕಷ್ಟವಾಗಿದ್ದು, ಸಮಯಕ್ಕೆ ಸರಿಯಾಗಿ ಸಂಚರಿಸಲು ಸಾಧ್ಯವಾಗದ ಕಾರಣ ಕಲೆಕ್ಷನ್ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಸ್ ಚಾಲಕರು ಹಾಗೂ ನಿರ್ವಾಹಕರ ಕೆಲಸದ ಪರಿಸ್ಥಿತಿಯೂ ಕಠಿಣವಾಗಿದೆ. ದಿನಕ್ಕೆ 7ರಿಂದ 8 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದ್ದು, ಸಮರ್ಪಕ ರಜೆ, ಸಂಬಳ ಹಾಗೂ ಇತರ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಸಿದ್ದಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ತಲುಪಬೇಕಾದ ಬಸ್ ಟ್ರಾಫಿಕ್‌ನಿಂದಾಗಿ 10.30ಕ್ಕೆ ತಲುಪುವಂತಾಗಿದೆ. ಇದರಿಂದ ಪ್ರಯಾಣಿಕರಿಗೂ ಹಾಗೂ ಸಿಬ್ಬಂದಿಗೂ ತೊಂದರೆಯಾಗುತ್ತಿದೆ.
ನಗರದ ಪ್ರಮುಖ ಪ್ರವೇಶ ದ್ವಾರವಾಗಿರುವ ಕೂಳೂರು ರಸ್ತೆಯ ಅವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆ ವಿರುದ್ಧ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಷನ್ (ರಿ), ಬೆಂಗಳೂರು ದಕ್ಷಿಣ ಕನ್ನಡ ವಿಭಾಗದ ಜಿಲ್ಲಾಧ್ಯಕ್ಷ ಸಂದೀಪ್ ಸಾಲಿಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಳೂರು ರಸ್ತೆ ಮಂಗಳೂರು ನಗರಕ್ಕೆ ಪ್ರವೇಶಿಸುವ ಪ್ರಮುಖ ಮಾರ್ಗವಾಗಿದ್ದು, ವಿಮಾನ ನಿಲ್ದಾಣ, ಹಾರ್ಬರ್ ಹಾಗೂ ಎ.ಜೆ. ಆಸ್ಪತ್ರೆ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇಂತಹ ಮಹತ್ವದ ರಸ್ತೆಯ ಪರಿಸ್ಥಿತಿ ಮಾತ್ರ ತೀವ್ರ ಹದಗೆಟ್ಟಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.
ದೇಶದ ವಿವಿಧ ಭಾಗಗಳಿಗೆ, ಅದರಲ್ಲೂ ಉತ್ತರ ಪ್ರದೇಶ ಹಾಗೂ ಗುಜರಾತ್‌ನಂತಹ ರಾಜ್ಯಗಳಿಗೆ ತೆರಳಿದಾಗ ಅಲ್ಲಿನ ರಸ್ತೆಗಳ ಅಭಿವೃದ್ಧಿ ಗಮನ ಸೆಳೆಯುತ್ತದೆ. ಆದರೆ ಮಂಗಳೂರು ನಗರದ ಪ್ರಮುಖ ರಸ್ತೆಯೇ ಈ ರೀತಿಯಾಗಿ ಹದಗೆಟ್ಟಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಕೂಳೂರು ನಗರ ವ್ಯಾಪ್ತಿಯಲ್ಲಿದೆಯೇ ಅಥವಾ ಗ್ರಾಮೀಣ ಪ್ರದೇಶದಲ್ಲಿದೆಯೇ ಎಂಬ ಅನುಮಾನ ಮೂಡುವಂತಾಗಿದೆ ಎಂದು ಸಂದೀಪ್ ಸಾಲಿಯಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಇದೇ ರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದು ಗಾಯಗೊಂಡ ಘಟನೆ ನಡೆದಿತ್ತು. ಘಟನೆ ಬಳಿಕ ಮರುದಿನವೇ ರಸ್ತೆ ಮೇಲೆ ತಾತ್ಕಾಲಿಕವಾಗಿ ಡಾಂಬರು ಹಾಕುವ ಕೆಲಸ ಕೈಗೊಳ್ಳಲಾಗಿತ್ತು. ರಸ್ತೆ ಅವ್ಯವಸ್ಥೆ ವಿಚಾರವಾಗಿ ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನ ಚಾಲಕರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಟ್ರಾಫಿಕ್ ಜಾಮ್‌ನಿಂದಾಗಿ ಯುವಕನೊಬ್ಬ ಗಾಯಗೊಂಡ ಘಟನೆಯೂ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಕೂಳೂರು ರಸ್ತೆ ಪ್ರಮುಖ ಮಾರ್ಗವಾಗಿರುವುದರಿಂದ ಶಾಲಾ ಮಕ್ಕಳಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಪ್ರವಾಸ ಸೇರಿದಂತೆ ವಿವಿಧ ಉದ್ದೇಶಗಳಿಗೆ ತೆರಳುವ ಮಕ್ಕಳ ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುತ್ತಿವೆ. ಸಾಮಾನ್ಯ ವಾಹನ ಸವಾರರು ಹಾಗೂ ಟ್ಯಾಕ್ಸಿ ಚಾಲಕರಿಗೂ ಪ್ರತಿದಿನ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಕೂಳೂರು ವ್ಯಾಪ್ತಿಯ ಸರ್ವಿಸ್ ರಸ್ತೆಯ ಪರಿಸ್ಥಿತಿಯೂ ಸಮರ್ಪಕವಾಗಿಲ್ಲ. ವಿಮಾನ ನಿಲ್ದಾಣದ ಕಡೆಯಿಂದ ಮಂಗಳೂರಿನತ್ತ ತೆರಳಲು ಬಳಸುವ ಸರ್ವಿಸ್ ರಸ್ತೆಯ ಬಗ್ಗೆಯೂ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಈವರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂದೀಪ್ ಸಾಲಿಯಾನ್ ಆರೋಪಿಸಿದ್ದಾರೆ.
ರಸ್ತೆ ಹಾಗೂ ಮೂಲಸೌಕರ್ಯ ವಿಚಾರದಲ್ಲಿ ಯಾವುದೇ ರಾಜಕೀಯ ಬೇಧಭಾವ ಬೇಡ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷದವರಾಗಿದ್ದರೂ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿ. ಕೂಳೂರು ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ನಡೆಸುವುದು ನಿಶ್ಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

