ವಿಟ್ಲ: ಕೋಳಿ ಅಂಕವು ಬಂಟ್ವಾಳ ತಾಲೂಕಿನ ವಿಟ್ಲಕಸಬ ಗ್ರಾಮದ ಮಾಡ ಎಂಬಲ್ಲಿ ನಡೆಯುತ್ತಿದ್ದ ವೇಳೆ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಪರಾರಿಯಾಗಿದ್ದಾರೆ.
ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ಮತ್ತು ಸಿಬ್ಬಂದಿಯ ತಂಡ ಎ.12 ರವಿವಾರ ಸಂಜೆ ದಾಳಿ ನಡೆಸಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಸುಮಾರು 20 ರಿಂದ 25 ಜನರ ಗುಂಪು ಸೇರಿ ಕೋಳಿ ಅಂಕದಲ್ಲಿ ತೊಡಗಿರುವುದು ಕಂಡುಬಂದಿದ್ದು, ಪೊಲೀಸರನ್ನು ಕಂಡ ಕೂಡಲೇ ಜೂಜುಕೋರರು ಓಡಿದ್ದಾರೆ.
ಈ ಸಂದರ್ಭದಲ್ಲಿ ವಿಟ್ಲಕಸಬ ನಿವಾಸಿಗಳಾದ ಚಂದ್ರಶೇಖರ (43), ಇಬ್ರಾಹಿಂ (65), ಹೊನ್ನಪ್ಪ (46) ಮತ್ತು ವಿಟ್ಲಪಡ್ನೂರು ನಿವಾಸಿ ಚಂದ್ರಹಾಸ (32) ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಳಿದ ಆರೋಪಿಗಳನ್ನು ಹಿಡಿಯಲು ಪೊಲೀಸರು ಮುಂದಾದಾಗ ಬಾಬಣ್ಣ ಮತ್ತು ಹೊನ್ನಪ್ಪ ಹರಿಜನ ಎಂಬವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರ್ಯಾಚರಣೆಯ ವೇಳೆ ಜೂಜಾಟಕ್ಕೆ ಬಳಸಿದ್ದ 3 ಕೋಳಿಗಳು, 1000 ರೂ. ನಗದು ಹಾಗೂ ಇತರೆ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

