ಮಂಗಳೂರು : ರಸ್ತೆ ಅಪಘಾತಗಳಾದಾಗ ಗಾಯಾಳಿಗೆ ತುರ್ತು ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಜಾರಿಗೊಳಿಸಲಾಗಿರುವ “ಪಿಎಂ ರಾಹತ್’ ಯೋಜನೆಯನ್ನು ರಾಜ್ಯದಲ್ಲಿ ವ್ಯವಸ್ಥಿತವಾಗಿ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ 2014-15ನೇ ಸಾಲಿನಲ್ಲಿ ಮುಖ್ಯಮಂತ್ರಿಗಳು ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೊಳಿಸಿದ್ದರು. ಅದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಹೊಸದಾಗಿ ಪಿಎಂ ರಾಹತ್ ಯೋಜನೆ ದೇಶದೆಲ್ಲೆಡೆ ಜಾರಿಗೆ ತಂದಿದೆ.
ಆದರೆ ತಾಂತ್ರಿಕ ಕಾರಣದಿಂದ ಇನ್ನೂ ಈ ಯೋಜನೆ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಂಡಿಲ್ಲ. ಈ ಯೋಜನೆ ಅತ್ಯಂತ ಉಪಯುಕ್ತವಾಗಿರುವ ಕಾರಣ ಪಿಎಂ ರಾಹತ್ ಯೋಜನೆಯಡಿ ತುರ್ತು ಚಿಕಿತ್ಸೆಗಾಗಿ ನೀಡಲಾಗುವ 1.50 ಲಕ್ಷ ರೂ. ಅದರ ಜೊತೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಹೀಗೆ ಒಟ್ಟು 2.5 ಲಕ್ಷ ರೂ.ಗಳವರೆಗೆ ಚಿಕಿತ್ಸಾ ವೆಚ್ಚ ಭರಿಸಲು ನಿರ್ಧರಿಸಲಾಗಿದೆ ಎಂದರು.

