ಉಳ್ಳಾಲ : ಲೋಕೋಪಯೋಗಿ ಇಲಾಖೆ ಅವರು ತೊಕ್ಕೊಟ್ಟುವಿನಿಂದ ನಾಟೆಕಲ್ ವರೆಗಿನ ಬೀದಿಬದಿ ವ್ಯಾಪಾರಿಗಳನ್ನು ಬುಲ್ದೊಜರ್ ಬಳಸಿ ಕಾರ್ಯಾಚರಣೆ ಮಾಡಿರುವ ಕ್ರಮವನ್ನು ಖಂಡಿಸಿ ಇಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಉಳ್ಳಾಲ ತಾಲೂಕು ಸಮಿತಿ (ಸಿಐಟಿಯು) ನೇತೃತ್ವದಲ್ಲಿ ತೊಕ್ಕೊಟ್ಟು ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು. ತೊಕ್ಕೊಟ್ಟು, ಕುತ್ತಾರು, ದೇರಳಕಟ್ಟೆ, ನಾಟೆಕಲ್, ಕೋಟೆಕಾರ್, ತಲಪಾಡಿ ಭಾಗದ ಹಲವಾರು ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರತಿಭಟನೆ ಉದ್ಘಾಟಿಸಿ ಮಾತನಾಡುತ್ತಾ, ಬೀದಿಬದಿ ವ್ಯಾಪಾರಿಗಳು ಆರ್ಥಿಕವಾಗಿ ದುರ್ಬಲರು ಮತ್ತು ಯಾವುದೇ ಕೌಶಲ್ಯ ಮತ್ತು ಶಿಕ್ಷಣದಿಂದ ವಂಚಿತರಾದವರಾಗಿದ್ದಾರೆ ಅಂತಹ ದುರ್ಬಲರ ಮೇಲೆ ಬುಲ್ದೊಜರ್ ಬಳಸಿ ಅವರ ಬದುಕನ್ನು ನಾಶ ಮಾಡಲು ಹೊರಟಿರುವುದು ಖೇದಕರ ಎಂದು ತಿಳಿಸಿದ ಅವರು ಬಡವರ ಮೇಲಿನ ಕಾರ್ಯಾಚರಣೆ ಸರಕಾರದ ಸಾಧನೆಯೇ..? ಎಂದು ಅವರು ಪ್ರಶ್ನಿಸಿದರು.

ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ, ದೇಶದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ಕಾನೂನು, ನಿಯಮಮಾವಳಿಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ, ಬಡವರ ಮೇಲಿನ ಬುಲ್ದೊಜರ್ ಧಾಳಿ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ ಅವರು ಅತ್ಯಂತ ಭ್ರಷ್ಟವಾಗಿರುವ ಲೋಕೋಪಯೋಗಿ ಮತ್ತು ಹೆದ್ದಾರಿ ಇಲಾಖೆಗಳ ದಬ್ಬಾಳಿಕೆ ಎದುರಿಸಲು ಬೀದಿಬದಿ ವ್ಯಾಪಾರಿಗಳು ಸಿದ್ದರಾಗಿದ್ದೇವೆ ಎಂದು ಸವಾಲು ಹಾಕಿದರು. ಸ್ಥಳೀಯ ಸಂಸ್ಥೆಗಳು ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸದೆ ಅವರ ಕಾನೂನುಬದ್ದ ಹಕ್ಕನ್ನು ನಿರಾಕರಿಸಿರುವುದೇ ಈ ರೀತಿಯ ಧಾಳಿಗೆ ಕಾರಣವಾಗಿದೆ ಎಂದವರು ಹೇಳಿದರು.
ಹಿರಿಯ ರೈತ ನಾಯಕ ಕೃಷ್ಣಪ್ಪ ಸಾಲಿಯಾನ್,ಡಿವೈಎಫ್ಐ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ, ಸಂಘದ ಅಧ್ಯಕ್ಷರಾದ ಮುಜಾಫರ್ ಅಹ್ಮದ್ ಮಾತನಾಡಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಶೇಖರ್ ಕುಂದರ್, CITU ಜಿಲ್ಲಾ ಮುಖಂಡರಾದ ಸುಂದರ ಕುಂಪಲ, ಪ್ರಮೋಧಿನಿ ಕಲ್ಲಾಪು,ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕರಾದ ಅಬ್ದುಲ್ ಖಾದರ್ ವಾಮಂಜೂರು, ಸಿಕಂದರ್ ಬೇಗ್, ವಿನಾಯಕ್ ಶೆಣೈ,ಸಲೀಮ್ ಬೀರಿ, ವಿಜಯ್ ತಲಪಾಡಿ, ವಿಕ್ರಂ,ಮರ್ಸಿನ್ ಡಿಸೋಜಾ, ನವಾಜ್, ಕಲಂದರ್, ಸದಾಶಿವ, ವಿಶ್ವ, ದಿನೇಶ್, ಹರೀಶ್ ಕೆರೆಬೈಲ್, ಮುಂತಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್ ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

