ಮಂಗಳೂರು : ನಮ್ಮಲ್ಲಿ ಚಾಲನಾ ಪರವಾನಿಗೆ, ಪಾನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹೀಗೆ ಸರ್ಕಾರವೇ ನೀಡಿದ ಎಲ್ಲಾ ಕಾರ್ಡುಗಳಿವೆ. ಆದರೂ ಎಸ್ಐಆರ್ ಅರ್ಜಿ ಫಾರಂನಲ್ಲಿ ಲೋಪ ಕಂಡು ಬಂದರೆ 11 ದಾಖಲೆಗಳೇಕೆ? ಹಾಗಾದರೆ ಇಷ್ಟೆಲ್ಲಾ ಕಾರ್ಡುಗಳನ್ನು ನೀಡಿದವರನ್ನು ದೇಶದ್ರೋಹಿ ಪಟ್ಟಿಗೆ ಹಾಕ್ತೀರಾ ಎಂದು ಎಸ್ ಡಿಪಿಐ ನಗರ ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂರು ಪ್ರಶ್ನಿಸಿದ್ದಾರೆ.

ಎಸ್ ಡಿಪಿಐ ನಗರ ಜಿಲ್ಲಾ ಸಮಿತಿಯಿಂದ ಮಂಗಳೂರಿನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಚುನಾವಣಾ ಅಯೋಗದಿಂದ ನಡೆಯುತ್ತಿದ್ದರೂ ದೇಶದಲ್ಲಿರುವ ಅಕ್ರಮ ವಿದೇಶಿಗರನ್ಜು ಹೊರಹಾಕಲು ತಾವು ನಡೆಸುತ್ತಿರುವುದಾಗಿ ಬಿಜೆಪಿ ಸಚಿವರು ಹೇಳುತ್ತಿದ್ದಾರೆ. ಈಗಾಗಲೇ 13 ರಾಜ್ಯಗಳಲ್ಲಿ ಈ ಪ್ರಕ್ರಿಯೆ ಮುಗಿದಿದ್ದು ಎಷ್ಟು ವಿದೇಶಿಗರು, ನುಸುಳಿಕೋರರನ್ನು ಪತ್ತೆಹಚ್ಚಲಾಗಿದೆ? 2002ರ ಮತದಾರರ ಪಟ್ಟಿಯಲ್ಲಿರುವ ಲೋಪದಿಂದಾಗಿ ಎಸ್ಐಆರ್ ನಿಂದ ಆರು ಕೋಟಿ ಮತದಾರರು ವಂಚಿತರಾಗಲಿದ್ದಾರೆ.

ಇದರಲ್ಲಿ ಮುಸ್ಲಿಮರು ಹೆಚ್ಚೆಂದರೆ ಒಂದೂವರೆ ಕೋಟಿ ಇರಬಹುದು, ಉಳಿದವರು ಯಾರೆಂದು ಪ್ರಶ್ನಿಸಿದ ಅಶ್ರಫ್, ಎಸ್ಐಆರ್ ಲೋಪದೋಷಗಳ ಬಗ್ಗೆ ಪ್ರತಿಯೊಬ್ಬರೂ ಧ್ವನಿ ಎತ್ತಿ ಆಂದೋಲನನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ ಮೂರನೇ ಹಂತದಲ್ಲಿ ಜೂನ್ 29ರಿಂದ ಎಸ್ಐಆರ್ ಪ್ರಕ್ರಿಯೆ ಆರಂಭಗೊಂಡಿದೆ. ಬಿಎಲ್ಒಗಳಿಗೆ ಎರಡು ದಿನ ಮಾತ್ರ ತರಬೇತಿ ನೀಡಲಾಗಿದೆ. ಇಷ್ಟು ವರ್ಷಗಳಲ್ಲಿ ಜನಗಣತಿ ಸಂದರ್ಭ ಮತದಾರರ ಕೈಗೆ ನೀಡದ ಫಾರಂ ಈಗ ನೀಡಲಾಗಿದ್ದರೂ ಈ ಬಗ್ಗೆ ಜಾಗೃತಿ ಮೂಡಿಸಿಲ್ಲ. ವಿಶೇಷ ಗ್ರಾಮಸಭೆ, ವಾರ್ಡ್ ಸಭೆ ನಡೆಸುವಂತೆ ಸರ್ಕಾರ ಹೇಳಿದರೂ ಚುನಾವಣಾ ಅಯೋಗ ಪಾಲಿಸಿಲ್ಲ. ಬಿಎಲ್ ಒಗಳಿಗೆ ಶೇ.40ರಷ್ಟು ಅರ್ಜಿ ಫಾರಂ ಮಾತ್ರ ನೀಡಲಾಗಿದ್ದು ಕೆಲವು ಮನೆಗಳಿಗೆ ಒಂದೊಂದು ಅರ್ಜಿ ಫಾರಂ ಮಾತ್ರ ನೀಡಲಾಗಿದ್ದು ಇನ್ನೂ ಹಲವರಿಗೆ ಫಾರಂ ಸಿಕ್ಕಿಲ್ಲ.

ಆದರೂ ತರಾತುರಿಯಲ್ಲಿ ಫಾರಂ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ಬಿಎಲ್ಒಗಳು ಹೆಚ್ಚಾಗಿ ಅಂಗನವಾಡಿ ಕಾರ್ಯಕರ್ತರೇ ಆಗಿದ್ದು ಅವರ ಮೇಲೆ ಒತ್ತಡ ಹೇರಿ ತರಾತುರಿಯಲ್ಲಿ ಫಾರಂ ಸಂಗ್ರಹ ಮಾಡಿಸುತ್ತಿರುವುದೇಕೆ? ಮೂಡುಶೆಡ್ಡೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಆರು ಶಿಕ್ಷಕರ ಪೈಕಿ ಐವರು ಬಿಎಲ್ ಒಗಳು, ಹೀಗಿರುವಾದ ಆ ಶಾಲೆಯ ಮಕ್ಕಳ ಪಾಡೇನು? ತರಗತಿ ಭರ್ತಿ ಮಾಡುವುದು ಯಾವಾಗ? ಮಂಗಳೂರು ನಗರದಲ್ಲಿ ಬಹುತೇಕ ಶಿಕ್ಷಕರೇ ಬಿಎಲ್ಒಗಳಾಗಿದ್ದು ಶಾಲೆ ಬಿಟ್ಟ ಬಳಿಕ ಫಾರಂ ವಿತರಣೆ ಮಾಡುತ್ತಿದ್ದಾರೆ. ಒತ್ತಡದಿಂದಾಗಿ ಈಗಾಗಲೇ ನಾಲ್ವರು ಬಿಎಲ್ಒಗಳು ಸಾವೀಗೀಡಾಗಿದ್ದಾರೆಂದು ಅಶ್ರಫ್ ಖೇದ ವ್ಯಕ್ತಪಡಿಸಿದರು.

ಬಿಎಲ್ಒಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣ ನೀಡಿ ರಾಜ್ಯ ಚುನಾವಣಾ ಅಯೋಗದ ಆಯುಕ್ತರ ಸೂಚನೆ ಮೇರೆಗೆ ಎಫ್ಐಆರ್ ಹಾಕಲಾಗುತ್ತಿದೆ. 2002ರ ಕನ್ನಡದಲ್ಲಿದ್ದ ಮತದಾರರ ಪಟ್ಟಿ ಆಂಗ್ಲ ಭಾಷೆಗೆ ವರ್ಗಾಯಿಸಲಾಗಿದೆ. ಎಸ್ಐಆರ್ ಫಾರಂ ಕನ್ನಡದಲ್ಲಿದ್ದರೆ ಬಿಎಲ್ಒಗಳ ಆಪ್ ಇಂಗ್ಲೀಷ್ ನಲ್ಲಿದೆ. ಹೀಗೆ ಸಾಕಷ್ಟು ಗೊಂದಲಗಳಿದ್ದರೂ ಫಾರಂನಲ್ಲಿ ತಪ್ಪುಗಳಿದ್ದ ಮತದಾರನಿಗೆ ನೋಟಿಸ್ ನೀಡಬಹುದಾಗಿದೆ. ಜನರು ಸುಮ್ಮನೆ ಕೂತರೆ ತಮ್ಮ ಅಧಿಕಾರದ ವೈಫಲ್ಯ ಅರಿಯಬಹುದೆನ್ನುವ ಕಾರಣಕ್ಕೆ ಎಸ್ಐಆರ್ ಹೆಸರಲ್ಲಿ ಬಿಜೆಪಿ ಜನರನ್ನು ಗೊಂದಲಕ್ಕೆ ಸಿಲುಕಿಸಿದೆ.

ಅಲ್ಪಸಂಖ್ಯಾತ, ದಲಿತ, ಆದಿವಾಸಿಗಳ ಮತ ಇಲ್ಲದಂತೆ ಮಾಡಿದರೆ ಸುಲಭವಾಗಿ ಅಧಿಕಾರ ಹಿಡಿಯುವ ಷಡ್ಯಂತ್ರವೂ ಇರಬಹುದು ಎಂದು ಅಶ್ರಫ್ ಅನುಮಾನ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಅಬ್ದುಲ್ ಅಝೀಝ್ ಸುರತ್ಕಲ್ ಮತ್ತು ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ರಝಾ ಕುದ್ರೋಳಿ ಸುದ್ದಿಗೋಷ್ಠಿಯಲ್ಲಿದ್ದರು.