ದಕ್ಷಿಣ ಕನ್ನಡ: ಧರ್ಮಸ್ಥಳದ ಸುತ್ತಮುತ್ತಲಿನಲ್ಲಿ ಶವ ಹೂತಿಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ದಿನಕ್ಕೊಂದು ರೋಚಕ ಟ್ವಿಸ್ಟ್ ಸಿಗುತ್ತಿದ್ದು, ನಿನ್ನೆ ಒಂದಲ್ಲ, ಒಟ್ಟು ಮೂರು ಅಸ್ಥಿಪಂಜರ ಪತ್ತೆಯಾಗಿವೆ ಎಂದು ದೂರುದಾರೆ ಸುಜಾತಾ ಭಟ್ ಪರ ವಕೀಲರಾದ ಮಂಜುನಾಥ್ ಗೌಡ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇಂದೂ ಸಹ ಉತ್ಖನನ ಕಾರ್ಯ ಸ್ಪಾಟ್ ನಂಬರ್ 12 ರಲ್ಲಿ ನಡೆಯುತ್ತಿದ್ದು, ನಿನ್ನೆ ಅನಾಮಿಕ ಹಾಗೂ ಸಾಕ್ಷಿ ದೂರುದಾರ ದಿಢೀರ್ ಆಗಿ ಬಂಗ್ಲೆಗುಡ್ಡದ ಮೇಲೆ ಗುಂಡಿ ಅಗೆಯಲು ಎಸ್ಐಟಿ ಅಧಿಕಾರಿಗಳಿಗೆ ಸೂಚಿಸಿದ್ದ. ಅದರಂತೆ ಕಾರ್ಮಿಕರಿಂದ ಸ್ಥಳವನ್ನು ಅಗೆಸಿದ್ದಾಗ ಸುಮಾರು ಮೂರು ದೇಹಗಳ ಅಸ್ಥಿಪಂಜರ ಸಿಕ್ಕಿದ್ದು, ಆ ಪೈಕಿಯ ಸಮಾಧಿಯಲ್ಲಿ ಓರ್ವ ಮಹಿಳೆಯ ಸೀರೆಯೂ ಪತ್ತೆಯಾಗಿದೆ ಎಂದು ಪತ್ರಿಕಾಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಅಸ್ಥಿಪಂಜರಗಳನ್ನು ಕೆಎಂಸಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ. ನಿನ್ನೆಯ ಉತ್ಖನನದ ವೇಳೆ ಸುಮಾರು 140 ಕ್ಕೂ ಮೂಳೆಗಳು ಪತ್ತೆಯಾಗಿವೆಯಂತೆ. ಇನ್ನು ಇಂದು ನೇತ್ರಾವತಿ ನದಿ ದಡದ ಬಳಿಯ ಕಾಡಿನಲ್ಲಿ ಉತ್ಖನನ ನಡೆಯುತ್ತಿದ್ದು, ದೂರುದಾರ ತೋರಿಸಿದ 11ನೇ ಪಾಯಿಂಟ್ ನಲ್ಲಿ ಆಗೆಯಲಾಗುತ್ತಿದೆ. ಸುಮಾರು 6 ಅಡಿಯ ಬಳಿಕ ಏನೂ ಪತ್ತೆಯಾಗದಿದ್ದರೆ ಮುಂದಿನ ಪಾಯಿಂಟ್ ಗೆ ಹೋಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಪಾಯಿಂಟ್ ಸಂಖ್ಯೆ 13 ರ ಉತ್ಖನನ ಪೂರ್ಣವಾದರೆ ಇದೇ ರೀತಿ ಉಳಿದ 17 ಸ್ಪಾಟ್ ಗಳಲ್ಲಿ ಕಳೇಬರಕ್ಕಾಗಿ ಉತ್ಖನನ ಕಾರ್ಯ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಒಟ್ಟು 30 ಸ್ಥಳಗಳಲ್ಲೂ ಎಸ್ ಐಟಿ ಅಧಿಕಾರಿಗಳು ಮಹಜರು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರನೇ ಗುರುತು ಸ್ಥಳದಲ್ಲಿ ಜುಲೈ 31 ರಂದು ಅಸ್ಥಿಪಂಜರ ಪತ್ತೆಯಾದ ಘಟನೆಗೆ ಸಂಬಂಧಿಸಿ ಎಸ್.ಐ.ಟಿ ತನಿಖಾಧಿಕಾರಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಸ್ಟ್ 1 ರಂದು ದೂರು ನೀಡಿದ್ದು, ಅದರಂತೆ ಯುಡಿಆರ್ ಪ್ರಕರಣ ದಾಖಲಾಗಿದೆ.
ಅಸ್ಥಿಪಂಜರದ ಅವಶೇಷಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಎಸ್.ಐ.ಟಿ ಅಧಿಕಾರಿಗಳು ಕಳುಹಿಸಿದ್ದಾರೆ. ಈ ಮಧ್ಯೆ ದೂರುದಾರ ಗುರುತಿಸಿದ್ದ 6 ನೇ ಜಾಗದಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಪ್ರಕರಣಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ಹೆಚ್ಚಿನ ತನಿಖೆಗಾಗಿ ಅದನ್ನು ಎಸ್ಐಟಿಗೆ ಹಸ್ತಾಂತರ ಮಾಡಲಿದ್ದಾರೆ.
ಧರ್ಮಸ್ಥಳದ ಕಾಡಿನಲ್ಲಿ ಎಸ್ಐಟಿ ಶವ ಶೋಧ ಕಾರ್ಯ ನಡೆಸುತ್ತಿರುವಾಗಲೇ ಮತ್ತೊಂದು ದೂರು ಸಲ್ಲಿಕೆಯಾಗಿದೆ. ಸಾಮಾಜಿಕ ಹೋರಾಟಗಾರ ಟಿ.ಜಯಂತ್ ಅವರು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ದೂರು ನೀಡಲು ಬಂದಿದ್ದಾರೆ. 15 ವರ್ಷದ ಹಿಂದೆ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು.
ಧರ್ಮಸ್ಥಳ ಗ್ರಾಮದಲ್ಲಿ ಆಕೆಯ ಶವವನ್ನು ಕಾನೂನು ಪ್ರಕ್ರಿಯೆ ಇಲ್ಲದೆ ಹೂಳಲಾಗಿದೆ ಎಂದು ಟಿ.ಜಯಂತ್ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಟಿ.ಜಯಂತ್ ಈ ಹಿಂದೆ ಸೌಜನ್ಯ ಪ್ರಕರಣದಲ್ಲೂ ಹೋರಾಟ ನಡೆಸಿದ್ದರು.

