ಮಂಗಳೂರು: ಇಂದು (ಜುಲೈ 30) ಬೆಳಿಗ್ಗೆ ನಂತೂರು ಪದವು ರಸ್ತೆಯಲ್ಲಿ ಟ್ಯಾಂಕರ್ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಸವಾರನನ್ನು ಅಡ್ಯಾರ್ ಕಣ್ಣೂರು ನಿವಾಸಿ ಎಂದು ಹೇಳಲಾಗುತ್ತಿದೆ.
ನಂತೂರು ಪದವು ರಸ್ತೆಯಾಗಿ ಹೋಗುತ್ತಿದ್ದ ದ್ವಿಚಕ್ರ ವಾಹನವು ಸವಾರನ ನಿಯಂತ್ರಣ ತಪ್ಪಿ ಉರುಳಿದ್ದು, ಹಿಂದಿನಿಂದ ಚಲಿಸುತ್ತಿದ್ದ ಟ್ಯಾಂಕರ್ ಸವಾರನ ಮೇಲೆ ಹರಿಯಿತು ಎನ್ನಲಾಗಿದೆ. ಇದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಸಂಚಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ಶಿವಾನಂದ ಎಂಬುವರು ಸ್ಕೂಟರ್ ನಲ್ಲಿ ಕೆಪಿಟಿಯಿಂದ ನಂತೂರು ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಟ್ಯಾಂಕರ್ ಚಾಲಕ ಸುನೀತ್ ಕೆ ಎಂಬವರು ನಂತೂರಿನಿಂದ ಕೆಪಿಟಿ ಕಡೆಗೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್ ನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಕೂಟರ್ ಸಮೇತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗೆ ಬಿದಿದ್ದಾರೆ. ಬಳಿಕ ಟ್ಯಾಂಕರ್ ನ ಎಡ ಹಿಂಭಾಗದ ಟೈರ್ ಸ್ಕೂಟರ್ ಸವಾರನ ತಲೆಯ ಮೇಲೆ ಹಾದುಹೋಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿದೆ. ಮೃತ ದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

