ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಸೇರಿ ಮಂಗಳೂರಿನ ದೇವಸ್ಥಾನಗಳಲ್ಲಿ ನಾಗರಪಂಚಮಿ ಸಂಭ್ರಮ ನಡೆಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ ಮಾಡಲಾಗುತ್ತದೆ.

ಕುಕ್ಕೆಯಲ್ಲಿ ಬೆಳಗ್ಗಿನ ಪೂಜೆಯ ಬಳಿಕ ನಾಗ ದೇವರಿಗೆ ಅಭಿಷೇಕ ನಡೆಯಿತು. ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ ನಡೆಸಲಾಯಿತು. ಜೊತೆಗೆ ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಸೇವೆ ನಡೆಯಿತು.

ನಂತರ ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿತರಣೆ ಮಾಡಲಾಯಿತು. ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿಸಿ ಭಕ್ತರು ತನು ಎರೆದರು. ಆಶ್ಲೇಷಾ ಬಲಿ, ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠೆ, ಶೇಷ ಸೇವೆ, ಕಾರ್ತಿಕ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾದರು. ದೇವಳದ ಹೊರಾಂಗಣದಲ್ಲಿ ಸರತಿ ಸಾಲಿನಲ್ಲಿ ನಿಂತು ಭಕ್ತರಿಂದ ಸೇವೆ ಸಮರ್ಪಣೆ ಮಾಡಲಾಯಿತು.