ಮಂಗಳೂರು: ಫಾದರ್ ಅಗಸ್ಟಸ್ ಮುಲ್ಲರ್ ಅವರಿಂದ 1880 ನೇ ಇಸವಿಯಲ್ಲಿ ಸ್ಥಾಪಿತವಾದ ಫಾದರ್ ಮುಲ್ಲ‌ರ್ ಸೇವಾ ಸಂಸ್ಥೆಗಳು ಅರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ನೀಡುತ್ತಾ ಬಂದಿವೆ. ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯವು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ವಿಭಾಗದಲ್ಲಿ ಉತ್ತಮ ಹೆಸರು ಹೊಂದಿದ್ದು, ವೈದ್ಯಕೀಯ ಪದವಿ ಶಿಕ್ಷಣದ ಬೆಳ್ಳಿ ಹಬ್ಬವನ್ನು ಈ ವರುಷ ಆಚರಿಸುತ್ತಿದೆ.

ಇದರ ಅಂಗವಾಗಿ ಜುಲೈ ಇಪ್ಪತ್ತೈದನೇ ತಾರೀಕಿನಿಂದ ಮೂರು ದಿನಗಳ ಶೈಕ್ಷಣಿಕ ಹಬ್ಬ “ಮುಲ್ಲರ್ ಸಿಲ್ವರ್ಕಾನ್” ನಡೆಯಲಿದೆ . ಜುಲೈ ಇಪ್ಪತ್ತೈದನೇ ತಾರೀಕು ವಿವಿಧ ವಿಷಯಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ. ಸಂಶೋಧನಾ ಬರಹಗಳನ್ನು ಬರೆಯುವುದು ಮತ್ತು ಮೌಲ್ಯಮಾಪನ ಮಾಡುವುದು, ಉತ್ತಮ ರಸಪ್ರಶ್ನೆ ಕೌಶಲ ಬೆಳೆಸಿಕೊಳ್ಳುವುದು, ವಿಪತ್ತು ನಿರ್ವಹಣೆ, ಸಿಮ್ಯುಲೇಶನ್ ಉಪಯೋಗಿಸಿ ಮೂಲಭೂತ ಶಸ್ತ್ರಚಿಕಿತ್ಸಾ ಕೌಶಲ್ಯವನ್ನು ಕಲಿಯುವುದು, ಹದಯ ಬಡಿತವನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಕಲೆ ಮತ್ತು ಇ ಸಿ ಜಿ ಪರೀಕ್ಷೆ, ಅಪರಾಧ ಪತ್ತೆಯಲ್ಲಿ ಉಪಯೋಗಿಸುವ ಫೋರೆನ್ಸಿಕ್ ತಂತ್ರಗಳು, ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ರೇಡಿಯಾಲಜಿ ಪರೀಕ್ಷೆಗಳ ಮಹತ್ವ ಇಂತಹ ಪ್ರಮುಖ ಮತ್ತು ಆಸಕ್ತಿದಾಯಕ ವಿಷಯಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ.

ಜುಲೈ ಇಪ್ಪತ್ತ ಆರನೇ ತಾರೀಕು ಸಮ್ಮೇಳನದ ಉದ್ಘಾಟನೆ ಫಾದರ್ ಮುಲ್ಲರ್ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ಮಣಿಪಾಲ ವಿಶ್ವವಿದ್ಯಾಲಯದ ಸಲಹೆಗಾರ ಮತ್ತು ರಕ್ಷಣಾ ಸಂಶೋಧನಾ ಸಂಸ್ಥೆಗಳ ಹಿಂದಿನ ನಿರ್ದೇಶಕರಾದ ಪ್ರೊಫೆಸರ್ ಲಾಜರ್ ಮ್ಯಾಥ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾ. ರಿಚರ್ಡ್ ಕುವೆಲ್ಲೊ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹೆಸರಾಂತ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ತಜ್ಞರಾದ ಡಾ ರಣದೀಪ್ ಗುಲೇರಿಯಾ, ಡಾ ಅವಿನಾಶ್ ಸೂಪೇ, ಡಾ ಸಚ್ಚಿದಾನಂದ, ಡಾ ಸುನಿಲ್ ರೈನಾ, ಡಾ ಶ್ರೀಪಾದ್ ಪಾಟೀಲ್, ಡಾ ತನು ಆನಂದ್, ಡಾ ಆಶಿಕ್, ಡಾ ಅಶೋಕ ಶೆಣೈ, ಡಾ ಅನಿಮೇಶ್ ಜೈನ್, ಡಾ ಮಾಲ್ಕಮ್ ಇವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ವೈದ್ಯಕೀಯ ಶಿಕ್ಷಣ, ಸಂಶೋಧನೆಗೆ ಸಂಬಂಧಪಟ್ಟ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಇದರ ಜೊತೆಗೆ, ಸಂಶೋಧನಾ ವಿಷಯಗಳು ಮತ್ತು ಸವಾಲುಗಳು ಎಂಬ ವಿಚಾರವಾಗಿ ಚರ್ಚೆಯು ನಡೆಯಲಿದೆ.

ಇನ್ನು ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ . ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಗಳ ಸಮಾಗಮವಾಗಲಿರುವ ಸಂಶೋಧನಾ ವಿಷಯಗಳ ಮಂಡನೆಯ ಸ್ಪರ್ಧೆಯೂ ಇದೆ. ಕಾರ್ಯಕ್ರಮದ ಕೊನೆಯಲ್ಲಿ ವೈದ್ಯಕೀಯ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಒಟ್ಟಿನಲ್ಲಿ, ಮೂರು ದಿನಗಳ ಶೈಕ್ಷಣಿಕ ಸಮ್ಮೇಳನವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಅನುಭವ ನೀಡಲಿದೆ. ದೇಶದಾದ್ಯಂತದ ಸುಮಾರು ಐನೂರು ವಿದ್ಯಾರ್ಥಿಗಳು ಭಾಗವಹಿಸುವ ಈ ಕಾರ್ಯಕ್ರಮವು ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕರು ಮತ್ತು ಆಡಳಿತ ಮಂಡಳಿಯ ಸರ್ವ ಸಹಕಾರ ಹಾಗೂ ಮಾರ್ಗದರ್ಶನದಿಂದ ಸಾಧ್ಯವಾಗಿದೆ. ಈ ಸಮ್ಮೇಳನದ ಸಂಘಟನಾ ಅಧ್ಯಕ್ಷ ಹಾಗೂ ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ ರಮೇಶ್ ಭಟ್ ಮತ್ತು ಸಂಘಟನಾ ಕಾರ್ಯದರ್ಶಿ ಡಾ ಶಿವಶಂಕರ ಎ ಆರ್ ಇವರ ನೇತೃತ್ವದಲ್ಲಿ ಸಂಘಟನಾ ಸಮಿತಿಯು ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿಸಿಕೊಂಡಿದೆ.