ನಂಜನಗೂಡು: ಮೈಸೂರು–ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಂಜನಗೂಡಿನ ಡಿ. ದೇವರಾಜ ಅರಸು ಸೇತುವೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸಂಸದ ಸುನಿಲ್ ಬೋಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಳೆಯ ಹಾಗೂ ಹೊಸ ಸೇತುವೆಗಳನ್ನು ಪರಿಶೀಲಿಸಿದರು. ಸೇತುವೆಗಳ ಅವ್ಯವಸ್ಥೆ ಕಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ನಂಜನಗೂಡು ನಗರದಿಂದ ಗುಂಡ್ಲುಪೇಟೆ ಮೂಲಕ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಳೆಯ ಸೇತುವೆ ಬಂದ್ ಆಗಿರುವುದರಿಂದ ಹೊಸ ಸೇತುವೆಯ ಮೇಲೆಯೇ ಎರಡೂ ಕಡೆಯ ವಾಹನಗಳ ಸಂಚಾರ ನಡೆಯುತ್ತಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಒಂದೇ ಸೇತುವೆಯ ಮೇಲೆ ಹೆಚ್ಚಿನ ವಾಹನಗಳ ಒತ್ತಡದಿಂದ ಅಪಘಾತಗಳ ಆತಂಕವೂ ಎದುರಾಗಿದೆ.

ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಸುನಿಲ್ ಬೋಸ್, ಸೇತುವೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಹಳೆಯ ಸೇತುವೆಯ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಒಂದು ತಿಂಗಳ ಗಡುವು ಕೇಳಿದ್ದಾರೆ. ಆದರೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದೇನೆ ಎಂದರು.

ಹೊಸ ಸೇತುವೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಡಿವೈಡರ್ ಅಳವಡಿಸಬೇಕು. ಹಳೆಯ ಸೇತುವೆಯ ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿರುವ ಮಧ್ಯಭಾಗದ ಟವರ್ ಕಂಬವನ್ನು ಸ್ಥಳಾಂತರಿಸಿ, ಸೇತುವೆಯನ್ನು ನೇರವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಒಂದು ವಾರದೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಸೇತುವೆ ಕಾಮಗಾರಿಗೆ ಖಾಸಗಿ ಜಮೀನು ಅಗತ್ಯವಿದ್ದಲ್ಲಿ ಸರ್ಕಾರದಿಂದ ಭೂಸ್ವಾಧೀನ ಮಾಡಿಕೊಂಡು ಸಂಬಂಧಪಟ್ಟವರಿಗೆ ಪರಿಹಾರ ನೀಡಬೇಕು. ಸಾರ್ವಜನಿಕರಿಂದ ಮತ್ತೆ ದೂರುಗಳು ಕೇಳಿಬರದಂತೆ ಹಾಗೂ ಅಪಘಾತಗಳಿಗೆ ಅವಕಾಶವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು. ನಂಜನಗೂಡಿನ ಆರ್.ಪಿ. ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಂಸದರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಇಂಧನ್ ಬಾಬು, ಮುಖಂಡರಾದ ರವಿಕುಮಾರ್, ಕೃಷ್ಣ, ಬಸವರಾಜು, ಹನಿಯಂಬಳ್ಳಿ ಗುರುಪಾದಸ್ವಾಮಿ, ಕೆ.ಬಿ ಸ್ವಾಮಿ, ಕೆಂಪಣ್ಣ, ಮೂಡಹಳ್ಳಿ ಮಹದೇವಸ್ವಾಮಿ, ಚೋಳರಾಜು, ಕುರಿಹುಂಡಿ ರಾಜು, ಮೋಹನ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಡಿಸೆಂಬರ್ 31ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ?

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಕುರಿತು ಮಾತನಾಡಿದ ಅವರು, ಚುನಾವಣೆಗಳನ್ನು ನಡೆಸುವಂತೆ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದರು. ಬಿಜೆಪಿ–ಜೆಡಿಎಸ್ ಮೈತ್ರಿ ಎಷ್ಟು ದಿನ ಮುಂದುವರಿಯಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

ಮೈಸೂರು ರಾಜಮನೆತನದ ಬಗ್ಗೆ ಗೌರವವಿದೆ

ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ಅರಮನೆ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಸುನಿಲ್ ಬೋಸ್, ಮೈಸೂರು ರಾಜಮನೆತನದ ಬಗ್ಗೆ ನಮಗೆ ಅಪಾರ ಗೌರವವಿದೆ. ಸರ್ಕಾರದಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ತಿದ್ದಿಕೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಯತೀಂದ್ರ ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಈ ವಿಚಾರವನ್ನು ವಿವಾದವನ್ನಾಗಿ ಮಾಡುವುದು ಬೇಡ. ಮೈಸೂರು ದಸರಾ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವುದಕ್ಕೆ ರಾಜಮನೆತನದ ಕೊಡುಗೆ ಅಪಾರವಾಗಿದೆ. ಮಹಾರಾಜರು ಮೈಸೂರಿನ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರ ಕೊಡುಗೆಯನ್ನು ಗೌರವಿಸಬೇಕು ಎಂದರು.