ಮಂಗಳೂರು ಮತ್ತು ಮಡಗಾಂವ್ (ಗೋವಾ) ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಇದೀಗ ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಹಾಗೂ ಮಂಗಳೂರು-ಮಡಗಾಂವ್ ನಡುವೆ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಾರಂಭಿಸುವಂತೆ ಕೋರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು 2025ರ ನವೆಂಬರ್ 12 ರಂದು, 2026ರ ಜೂನ್ 6 ರಂದು ಮತ್ತು 2026ರ ಆಗಸ್ಟ್ 10 ರಂದು ಕೇಂದ್ರ ಸಚಿವರಿಗೆ ಮನವಿ ಪತ್ರ ಬರೆದಿದ್ದರು.
ಸಂಸದರ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವರು, ಪ್ರಸ್ತುತ ಮಡಗಾಂವ್ ಮತ್ತು ಮಂಗಳೂರು ನಡುವೆ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಉಡುಪಿ, ಕುಂದಾಪುರ ಹಾಗೂ ಕಾರವಾರ ಮಾರ್ಗವಾಗಿ ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಈ ರೈಲು ಪರಿಷ್ಕೃತ ವೇಳಾಪಟ್ಟಿಯೊಂದಿಗೆ ರೈಲು ಸಂಖ್ಯೆ 26655/26656 ಯಶವಂತಪುರ – ಮಂಗಳೂರು – ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ಹೆಸರಿನಲ್ಲಿ ಸಂಚರಿಸಲಿದೆ ಎಂದು ಸಚಿವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

