ಮಂಗಳೂರು: ರಾಮ ಲಕ್ಷ್ಮಿನಾರಾಯಣ ಕನ್ವೆನ್ಷನ್ ಹಾಲಿನಲ್ಲಿ ನಡೆದ ಅತ್ಯಂತ ದುರದೃಷ್ಟಕರ ಹಾಗೂ ಆಘಾತಕಾರಿ ಮೇಲ್ಮಹಡಿ (ಬಾಲ್ಕನಿ) ಕುಸಿತ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಯ ಮನೆಗೆ ಹಾಗೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿಧ್ಯಾರ್ಥಿಗಳಿರುವ ಹೈಲಾಂಡ್ ಆಸ್ಪತ್ರೆಗೆ ಯೆಂಗ್ ಡೆಮಾಕ್ರಟ್ಸ್ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭಕ್ಕೆ ಅತ್ಯುತ್ಸಾಹದಿಂದ ಬಂದಿದ್ದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬರು ಈ ಅನಿರೀಕ್ಷಿತ ದುರಂತಕ್ಕೆ ಬಲಿಯಾಗಿರುವುದು ಹಾಗೂ ಇನ್ನುಳಿದವರು ನೋವಿನಿಂದ ಬಳಲುತ್ತಿರುವುದು ಅತೀವ ಶೋಚನೀಯ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಗಾಯಗೊಂಡಿರುವ ವಿದ್ಯಾರ್ಥಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ‌.

ಇಂದು ಯೆಂಗ್ ಡೆಮಾಕ್ರಟ್ಸ್ ನಾಯಕರು ಮೃತಪಟ್ಟ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಅಲ್ಲದೆ, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಯೆಂಗ್ ಡೆಮಾಕ್ರಟ್ಸ್ ರಾಜ್ಯ ಜಾಯಿಂಟ್ ಕನ್ವೀನರ್ ಮೂನಿಷ್ ಅಲಿ ಅವರು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಈ ಕೆಳಗಿನ ಪ್ರಮುಖ ಒತ್ತಾಯಗಳನ್ನು ಮಂಡಿಸಿದ್ದಾರೆ:

ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ನೀಡಬೇಕು ಮತ್ತು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು.

ಪೂರ್ವ ತಯಾರಿ ಇಲ್ಲದೆ ಕಾರ್ಯಕ್ರಮ ಆಯೋಜಕರ ಮತ್ತು ಕಟ್ಟಡದ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಗರದಲ್ಲಿರುವ ಹಳೆ ಹಾಗೂ ತುಕ್ಕು ಹಿಡಿದಿರುವ ಶಿಥಿಲಗೊಂಡ ಕಟ್ಟಡಗಳನ್ನು ಗುರುತಿಸಿ, ಅವುಗಳನ್ನು ಕೆಡವಲು ಜಿಲ್ಲಾಡಳಿತ ತಕ್ಷಣವೇ ಮುಂದಾಗಬೇಕು.

ವಾರ್ಷಿಕವಾಗಿ ಕಟ್ಟಡಗಳ ಪರವಾನಗಿ (ಲೈಸೆನ್ಸ್) ನವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಿ, ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಂಡ ನಂತರವೇ ಲೈಸೆನ್ಸ್ ನವೀಕರಿಸಬೇಕು. ಹಾಗೂ ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ

ನಿಯೋಗದಲ್ಲಿ ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಯಂಗ್ ಡೆಮಾಕ್ರಟ್ಸ್ ಮಂಗಳೂರು ನಗರ ಜಿಲ್ಲಾ ಕನ್ವೀನರ್ ಇರ್ಫಾನ್ ತುಂಬೆ, ಮಂಗಳೂರು ನಗರ ಜಿಲ್ಲಾ ಜಾಯಿಂಟ್ ಕನ್ವೀನರ್ ಗಳಾದ ತನ್ವೀರ್ ಉಳ್ಳಾಲ್ ಹಾಗೂ ಶರ್ಫುದ್ದೀನ್ ಬಜ್ಪೆ, ಯಂಗ್ ಡೆಮಾಕ್ರಟ್ಸ್ ಜಿಲ್ಲಾ ಸಮಿತಿ ಸದಸ್ಯರಾದ ಅನ್ಸಾರ್ ಕುದ್ರೋಳಿ, ಹಾಗೂ ಎಸ್.ಡಿ.ಪಿ.ಐ. ಉಳ್ಳಾಲ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಝಾಹಿದ್ ಮಲಾರ್ ಉಪಸ್ಥಿತರಿದ್ದರು.