ಮಂಗಳೂರು: ಖಾಸಗಿ ಸಿಟಿ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿಕೊಂಡಿದ್ದರಿಂದ ವಿದ್ಯಾರ್ಥಿಗಳು ಫುಟ್ ಬೋರ್ಡಿನಲ್ಲಿ ನೇತಾಡುತ್ತ ತೆರಳುವ ವಿಡಿಯೋ ವೈರಲ್ ಆಗಿತ್ತು.
ಇದರಿಂದ ಎಚ್ಚೆತ್ತುಕೊಂಡ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಬಸ್ಸಿನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕೇಸು ದಾಖಲಿಸಿದ್ದಾರೆ.
ತಲಪಾಡಿಯಿಂದ ಮಂಗಳೂರಿಗೆ ಬರುತ್ತಿದ್ದ 42 ನಂಬರಿನ ಖಾಸಗಿ ಸಿಟಿ ಬಸ್ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಗೆ ತಲುಪಿದಾಗ, ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ್ದು ಈ ವೇಳೆ ಫುಡ್ ಬೋರ್ಡಿನಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಹೊರಕ್ಕೆಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದ. ಇದರ ವಿಡಿಯೋವನ್ನು ಹಿಂದಿನಿಂದ ಬರುತ್ತಿದ್ದ ಆಟೋ ಚಾಲಕರೊಬ್ಬರು ಸೆರೆಹಿಡಿದಿದ್ದು ಅಪಘಾತ ಆದರೆ ಯಾರು ಹೊಣೆಯೆಂದು ಪ್ರಶ್ನಿಸಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಟ್ವಿಟರ್ ನಲ್ಲಿ ವಿಡಿಯೋವನ್ನು ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಎಡಿಜಿಪಿ ಅಲೋಕ್ ಕುಮಾರ್ ಗೆ ಟ್ಯಾಗ್ ಮಾಡಿತ್ತು. ಇದರಿಂದ ಅಲರ್ಟ್ ಆಗಿರುವ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್, ಬಸ್ಸಿನ ಸಿಬಂದಿ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ವಿಡಿಯೋ ಆಧರಿಸಿ ಸುಮೊಟೊ ಪ್ರಕರಣ ದಾಖಲಿಸಲು ಅವಕಾಶ ಇದ್ದರೂ, ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಆಟೋ ಚಾಲಕನಲ್ಲಿಯೇ ದೂರು ಪಡೆದು ಪ್ರಕರಣ ದಾಖಲಿಸಿದ್ದಾರೆ.
ಬಸ್ಸಿನ ಚಾಲಕ ಮಹಮ್ಮದ್ ಫಯಾಜ್ ಮತ್ತು ನಿರ್ವಾಹಕ ಮನೀಶ್ ತೀರಾ ನಿರ್ಲಕ್ಷ್ಯದಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗಿದ್ದಾರೆ. ಇದರಿಂದ ಪ್ರಯಾಣಿಕರ ಜೀವಕ್ಕೆ ಅಪಾಯಕ್ಕೀಡು ಮಾಡುವಂತೆ ವರ್ತಿಸಿದ್ದಾರೆ ಎಂದು ಕೇಸು ದಾಖಲಾಗಿದೆ.

