ಮಂಗಳೂರಿನ ಕುಡುಪು ಎಂಬಲ್ಲಿ ನಡೆದ ಕೇರಳ ಮೂಲದ ಯುವಕ ಅಶ್ರಫ್ ಎಂಬುವವರ ಗುಂಪು ಹತ್ಯೆ ಕೇಸಿನ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡು ಆರೋಪಿಗಳ ಹೆಡೆ ಮುರಿ ಕಟ್ಟಿ ಜೈಲಿಗೆ ತಳ್ಳಿದ್ದರೂ ಕೆಲ ಪಕ್ಷ ಹಾಗೂ ಸಂಘಟನೆಗಳ ಪ್ರಮುಖರು ಸರ್ಕಾರದ ವಿರುದ್ಧವೇ ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಇಡೀ ಪ್ರಕರಣದ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ. ಹೀಗಿರುವಾಗ ಈ ಪ್ರಕರಣದಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಹೇಳಲೇ ಬೇಕಾಗುತ್ತದೆ.

▪️ಅಧಿಕಾರಿಯೊಬ್ಬರ ನಿರ್ಲಕ್ಷ್ಯತೆಯಿಂದ ಮುಚ್ಚಿ ಹೋಗಬಹುದಾಗಿದ್ದ ಈ ಪ್ರಕರಣ ಗಮನಕ್ಕೆ ಬಂದ ಕೂಡಲೇ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಮತ್ತು ಇತರರು ಕೂಡಲೇ ವಿಧಾನ ಸಭಾ ಅಧ್ಯಕ್ಷರಾದ ಯು. ಟಿ ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ತಂದು ಪ್ರಕರಣದಲ್ಲಿ ಸಂಶಯಗಳು ಇರುವುದಾಗಿ ಹೇಳುತ್ತಾರೆ. ಆ ಕೂಡಲೇ ಯುಟಿಕೆ ಹಾಗೂ ದಿನೇಶ್ ಗುಂಡೂರಾವ್ ಸ್ಥಳೀಯ ಪೊಲೀಸ್ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಮೃತದೇಹದ ಪೋಸ್ಟ್ ಮಾರ್ಟಮ್ ಅನ್ನು ನಿಲ್ಲಿಸಿ ಸ್ಥಳೀಯ ಜನಪ್ರತಿನಿಧಿಗಳು ಮೃತ ಶರೀರದ ಪರಿಶೀಲನೆಗೆ ಅವಕಾಶ ಮಾಡಿ ಕೊಡಲಾಗುತ್ತದೆ.

▪️ಪ್ರಕರಣದಲ್ಲಿ ಸ್ಥಳೀಯ ಇನ್ಸ್ಪೆಕ್ಟರ್ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪ ಬಂದ ಹಿನ್ನಲೆಯಲ್ಲಿ ತನಿಖೆಯನ್ನು ಆ ಕೂಡಲೇ ಡಿಸಿಪಿ ರವಿಶಂಕರ್ ಹಾಗೂ ಎಸಿಪಿ ಧನ್ಯ ನಾಯಕ್ ಅವರಿಗೆ ವಹಿಸಿಕೊಡಲಾಗುತ್ತದೆ.

▪️ಅಂದು ರಾತ್ರಿ ಆರೋಪಿಗಳ ಮನೆಗಳಿಗೆ ದಾಳಿ ಮಾಡಿ 10 ಜನರನ್ನು ವಶಕ್ಕೆ ಪಡೆಯಲಾಗುತ್ತದೆ.

▪️ಸ್ಥಳೀಯ ಮಾಜಿ ಕಾರ್ಪೋರೇಟರ್ ನ ಪತಿ ರವೀಂದ್ರ ನಾಯಕ್ ಈ ಪ್ರಕರಣ ನಡೆಯಲು ಪ್ರೆರೇಪಿಸಿದ್ದಾನೆ ಎಂಬ ಹಿನ್ನಲೆಯಲ್ಲಿ ಆತನ ಮನೆಗೆ ಪೊಲೀಸ್ ದಾಳಿಯಾಗುತ್ತದೆ. ಆದರೆ ಆತ ಮೊಬೈಲ್ ಫೋನ್ ಗಳನ್ನು ಮನೆಯಲ್ಲೇ ಬಿಟ್ಟು ತಲೆ ಮರೆಸಿಕೊಂಡಿರುತ್ತಾನೆ.

▪️ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿದ್ದವರ ಮಾಹಿತಿಯನ್ನು ಸಂಗ್ರಹಿಸಿ ಅವರ ಮಾಹಿತಿಯ ಆಧಾರದ ಮೇಲೆ ಸುಮಾರು 40 ಜನರನ್ನು ವಿಚಾರಣೆ ನಡೆಸಿ ಈ ಪ್ರಕರಣದಲ್ಲಿ ಪಾಲ್ಗೊಂಡ ಇತರರನ್ನು ಬಂಧಿಸಿ ಒಟ್ಟು 20 ಜನರನ್ನು ವಶಕ್ಕೆ ಪಡೆಯಲಾಗುತ್ತದೆ.

▪️ಗುಂಪು ಸೇರಿ ತುಳಿದವರು, ಆರೋಪಿಗಳನ್ನು ಬೈಕ್ ನಲ್ಲಿ ಡ್ರಾಪ್ ಮಾಡಿದವರನ್ನು ಸಹ ಹೆಡೆ ಮುರಿ ಕಟ್ಟಲಾಗುತ್ತದೆ.

▪️ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್, ಸ್ಥಳೀಯ ಪೊಲೀಸ್ ಗುಪ್ತಚರ ಅಧಿಕಾರಿ (SB), ಸ್ಥಳೀಯ ಬೀಟ್ ಪೊಲೀಸ್ ಅನ್ನು ಅಮಾನತು ಮಾಡಲಾಗುತ್ತದೆ.

▪️ಇನ್ನು ಅಧಿಕಾರಿಗಳ ಅಮಾನತು ಮಾಡಲು ಏಕೆ ತಡವಾಯಿತು ಎಂಬ ಪ್ರಶ್ನೆಗೆ ಪ್ರಕರಣದ ತನಿಖಾ ಅಧಿಕಾರಿ ಸ್ಥಳೀಯ ಇನ್ಸ್ಪೆಕ್ಟರ್ ಆಗಿದ್ದರಿಂದ ಪೊಲೀಸ್ ನಿಯಮದಂತೆ ಅವರನ್ನು ಬದಲಾವಣೆ ಮಾಡದೇ ಅಮಾನತು ಮಾಡಲು ಬರುವುದಿಲ್ಲ. ಆ ಪ್ರಕ್ರಿಯೆ ಪೂರ್ತಿ ಗೊಂಡ ನಂತರವೇ ಅಮಾನತು ಆದೇಶ ಮಾಡಲಾಯಿತು.

▪️ರಾಜ್ಯದಲ್ಲಿ ಮೊದಲ ಬಾರಿಗೆ ಈ ಆರೋಪಿಗಳ ಮೇಲೆ ಮಾಬ್ ಲಿಂಚಿಂಗ್ ಕೇಸ್ ದಾಖಲು ಮಾಡಲಾಗುತ್ತದೆ.

▪️ಇನ್ನು ಪ್ರಕರಣದಲ್ಲಿ ಆರೋಪಿಗಳ ಮೇಲೆ ಯುಎಪಿಎ ಅಡಿ ಪ್ರಕರಣ ದಾಖಲಿಸುವ ಬಗ್ಗೆ ಕಾನೂನು ತಜ್ಞರ ಪರಿಶೀಲನೆ ಕೇಳಲಾಗಿದೆ.

ಹೀಗಿದ್ದೂ ಸರ್ಕಾರ ಈ ಪ್ರಕರಣದಲ್ಲಿ ಮೌನ ತಾಳಿದೆ, ಪ್ರಕರಣ ಮುಚ್ಚಿ ಹಾಕಲು ಹೊರಟಿದೆ ಎನ್ನುವವರಿಗೆ ಏನು ಹೇಳಬೇಕು. ಸುಮ್ಮನೇ ಹುಲಿಯಾ ಎಲ್ಲಿದ್ದಾರೆ, ಬಂಡೆ ಏನು ಮಾಡುತ್ತಿದ್ದಾರೆ ಎಂದು ಸುದ್ದಿ ಮಾಡಿ ಟಿ. ಆರ್. ಪಿ ಗೆ ಹಾತೊರೆಯುವ ಮಾಧ್ಯಮಕ್ಕೆ ಏನನ್ನಬೇಕು.

ಸದ್ಯ ಕಾಂಗ್ರೆಸ್ ಸರ್ಕಾರ ಇರುವುದರಿಂದ ಇಷ್ಟೆಲ್ಲಾ ಕಠಿಣ ಕ್ರಮ ಕೈಗೊಂಡಿದೆ. ಬಿಜೆಪಿ ಸರ್ಕಾರ ಇದ್ದಿದ್ದರೆ ಈ ಪ್ರಕರಣ ಯಾವ ರೀತಿಯಲ್ಲಿ ಹಳ್ಳ ಹಿಡಿಸಲಾಗುತ್ತಿತ್ತು ಎನ್ನುವ ಬಗ್ಗೆ ಚಿಂತಿಸಲು ಯಾರಿಗೂ ವಿಶೇಷ ಬುದ್ದಿ ಬೇಕಿಲ್ಲ.

ಸರ್ಕಾರ ಈ ಪ್ರಕರಣದ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರೂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಅವರಂತಹ ಜನಪರ ಜಾತ್ಯತೀತ ನಾಯಕರ ಮೇಲೆ ವೃಥಾ ಆರೋಪ ಮಾಡಿ ಸಾಧಿಸುವುದೇನು. ತಾವು ನ್ಯಾಯ ಪರವಾಗಿದ್ದರೂ ಈ ಸಮುದಾಯ ನಮ್ಮನ್ನೇ ಒಪ್ಪುತ್ತಿಲ್ಲ ಎಂದು ಇಲ್ಲಿನ ಜಾತ್ಯತೀತರ ಮನ ನೋಯಿಸಿದರೆ ನಮಗೆ ಆಗುವ ಲಾಭವೇನು? ಅವರನ್ನೂ ನಮ್ಮಿಂದ ದೂರ ಸರಿಸುವ ಹುನ್ನಾರವಲ್ಲದೇ ಇದು ಮತ್ತಿನ್ನೇನು? ಆರೋಪ ಮಾಡುವವರೇ ಉತ್ತರಿಸಬೇಕು. ಜೊತೆಗೆ ಈ ಪ್ರಕರಣದಲ್ಲಿ ಸರ್ಕಾರ ಇನ್ನು ಏನು ಮಾಡಬೇಕು ಎಂಬ ಸಲಹೆಯನ್ನೂ ನೀಡಬೇಕು.

-ಅಶ್ರಫ್ ಕೆಸಿ ರೋಡ್