ಮಂಗಳೂರು: ಟ್ಯಾಕ್ಸಿ ಚಾಲಕನಿಗೆ ಪೋನ್ ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿ ನಿಂದನೆ ಮಾಡಿದ ಆರೋಪದ ಮೇಲೆ ಮಲೆಯಾಳಂನ ಹಿರಿಯ ನಟ ಜಯಕೃಷ್ಣನ್ ಅವರನ್ನು ಉರ್ವಾ ಪೊಲೀಸರು ಶನಿವಾರ ಅರೆಸ್ಟ್ ಮಾಡಿದ್ದಾರೆ. ಅವರೊಂದಿಗೆ ಇದ್ದ ಸಂತೋಷ್ ಅಬ್ರಾಹಂನನ್ನೂ ಬಂಧಿಸಿದ್ದು, ಇನ್ನೋರ್ವ ಆರೋಪಿ ವಿಮಲ್ ನಾಪತ್ತೆಯಾಗಿದ್ದಾರೆ.
ಮಂಗಳೂರಿಗೆ ಬಂದಿದ್ದ ನಟ ಜಯಕೃಷ್ಣನ್ ಸೇರಿದಂತೆ ಮೂವರು ಉಬರ್ ಮತ್ತು ರ್ಯಾಪಿಡೊ ಕ್ಯಾಪ್ಟನ್ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ವಾಹನ ಹತ್ತುವ ಸ್ಥಳವನ್ನು ಬಿಜೈ ನ್ಯೂ ರೋಡ್ ಎಂದು ನಮೂದಿಸಿದ್ದರು. ನಾನು ಆ್ಯಪ್ ಮೂಲಕ ಕಾಲ್ ಮಾಡಿ ಪಿಕ್ ಆಪ್ ಬಗ್ಗೆ ವಿಚಾರಿಸಿದ್ದೆ.
ಆಗ ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿಯು ನನಗೆ ‘ಮುಸ್ಲಿಂ ಉಗ್ರವಾದಿ, ಟೆರರಿಸ್ಟ್’ ಎಂದು ಅಪಹಾಸ್ಯವಾಗಿ ಮಾತನಾಡಿದ್ದ. ಅಲ್ಲದೇ ಹಿಂದಿ ಹಾಗೂ ಮಲಯಾಳ ಭಾಷೆಯಲ್ಲಿ ನನ್ನ ತಾಯಿಗೆ ಅವಾಚ್ಯವಾಗಿ ಬೈದಿದ್ದ’ ಎಂದು ಆರೋಪಿಸಿ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಕ್ಯಾಬ್ ಚಾಲಕ ಶಫೀಕ್ ಉರ್ವಾ ಪೊಲೀಸ್ ಠಾಣೆಯಲ್ಲಿ ನಟ ಜಯಕೃಷ್ಣನ್, ಸಂತೋಷ್ ಅಬ್ರಾಹಂ ಹಾಗೂ ವಿಮಲ್ ವಿರುದ್ಧ ದೂರು ನೀಡಿದ್ದರು ಅದರಂತೆ ಇಂದು ಉರ್ವಾ ಪೊಲೀಸರು ನಟ ಜಯಕೃಷ್ಣನ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಂಠಪೂರ್ತಿ ಕುಡಿದು ಮಾತನಾಡಿದ್ದಾಗಿ ನಟ ಜಯಕೃಷ್ಣನ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ನಟನ ವಾಯ್ಸ್ ಸ್ಯಾಂಪಲ್ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.

