ಮಂಗಳೂರು : ಬುದ್ದಿವಂತರ ಜಿಲ್ಲೆ ಎಂದೇ ಕರೆಯಲ್ಪಡುವ ದಕ್ಷಿಣಕನ್ನಡ ಜಿಲ್ಲೆಯ ಜನರು ಲಕ್ಕಿ ಸ್ಕೀಂ ನಂಬಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೊದಲನೇ ಪ್ರಕರಣ ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ನದ್ದಾಗಿದ್ದು, ವಂಚನೆ ಪ್ರಕರಣದಲ್ಲಿ ಅಹಮ್ಮದ್ ಖುರೇಶಿ(34) ಹಾಗೂ ನಝೀರ್ @ ನಾಸೀರ್ (39) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಗಳು ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಆಯಿಷಾ ಕಟ್ಟಡದಲ್ಲಿರುವ ನ್ಯೂ ಶೈನ್ ಎಂಟರ್ ಪ್ರೈಸಸ್ ಕಛೇರಿಯನ್ನು ಹೊಂದಿದ್ದು, ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ಹೆಸರಿನಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ 3 ಸಾವಿರಕ್ಕೂ ಅಧಿಕ ಜನರಿಂದ 4 ಕೋಟಿ 20 ಲಕ್ಷ ಹಣವನ್ನು ಸ್ಕೀಮ್ ಗೆ ಕಟ್ಟಿಸಿಕೊಂಡಿದ್ದಾರೆ.

ಸ್ಕೀಂ ನಲ್ಲಿದ್ದವರಿಗೆ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಪ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ಲಕ್ಕಿ ಡ್ರಾ ನಲ್ಲಿ ಸಿಕ್ಕಿದವರಿಗೆ ಇವುಗಳನ್ನು ಕೊಡುವುದಾಗಿ ತಿಳಿಸಿ ಮಂಗ ಮಾಡಿದ್ದಾರೆ. ಬಳಿಕ ಏಕಾಏಕಿ ಕಚೇರಿಯನ್ನು ಬಂದ್ ಮಾಡಿ ಎಸ್ಕೇಪ್ ಆಗಿದ್ದಾರೆ.

ಈ ಕುರಿತಂತೆ ಮೋಸ ಹೋದ ಗ್ರಾಹಕರೊಬ್ಬರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಬಂಧಿತ ಆರೋಪಿ ಅಹಮ್ಮದ್ ಖುರೇಶಿಯ ಹೇಳಿಕೆಯಲ್ಲಿ ವಫಾ ಎಂಟರ್ ಪ್ರೈಸಸ್ ಲಕ್ಕಿ ಸ್ಕೀಂ ನ ಅಬ್ದುಲ್ ವಹಾಬ್ ಮತ್ತು ಬಶೀರ್ ಇವರೊಂದಿಗೆ ಸೇರಿ ಈ ಹಿಂದೆ ನಡೆಸಿರುವ ಲಕ್ಕಿ ಸ್ಕೀಮ್ ನ ಯೋಜನೆಗಳ ಬಗ್ಗೆ ಕೂಡ ತನಿಖೆಯನ್ನು ಮಾಡಲಾಗುತ್ತಿದೆ.

ಆರೋಪಿತರ ಪೈಕಿ ಅಹಮ್ಮದ್ ಖುರೇಶಿ ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸರಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ 1 ಪ್ರಕರಣ ದಾಖಲಾಗಿರುತ್ತದೆ. ಆರೋಪಿ ನಝೀರ್ ಯಾನೇ ನಾಸೀರ್ ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ದಾಖಲಾಗಿರುತ್ತದೆ.

ಆರೋಪಿತರು ಆಯಿಷಾ ಕಾಂಪ್ಲೆಕ್ಸ್ ನ ಕಛೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ ನ ಕಛೇರಿ ಹಾಗೂ ಶೈನ್ ಮಾರ್ಟ್ ಕಛೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್ ಗಳು, ಡಿವಿಆರ್ ಗಳನ್ನು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಇನ್ನೊಂದು ಪ್ರಕರಣ ನ್ಯೂ ಇಂಡಿಯಾ ರಾಯಲ್ ಸ್ಕೀಮ್ & ಗ್ರೀನ್ ಲೈಟ್ ಲಕ್ಕಿ ಸ್ಕೀಮ್ ಎಂಬ ಲಕ್ಕಿ ಸ್ಕೀಮ್ ದಾಗಿದೆ. ಇದರಲ್ಲೂ ದಕ್ಷಿಣಕನ್ನಡ ಮತ್ತು ಉಡುಪಿಯ 13 ಸಾವಿರಕ್ಕೂ ಅಧಿಕ ಜನ 19 ಕೋಟಿ ಗೂ ಅಧಿಕ ಹಣವನ್ನು ಕಟ್ಟಿದ್ದು, ಆರೋಪಿಗಳು ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಬಿ.ಎಂ.ಆರ್ ಕಟ್ಟಡದಲ್ಲಿರುವ ನ್ಯೂ ಇಂಡಿಯಾ ಕಛೇರಿಯನ್ನು ಏಕಾಏಕಿಯಾಗಿ ಬಂದ್ ಎಸ್ಕೇಪ್ ಆಗಿದ್ದಾರೆ.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಸುರತ್ಕಲ್‌ ಪೊಲೀಸರು ಆರೋಪಿಗಳಾದ ಬಜ್ಪೆ ನಿವಾಸಿ ಮುಹಮ್ಮದ್ ಅಶ್ರಫ್ (43), ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮುಹಮ್ಮದ್ ಹನೀಫ್ (50) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಎರಡು ಲಕ್ಕಿ ಸ್ಕೀಮ್ ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟ್ ರವರುಗಳು ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆಯನ್ನು ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.