ಮಂಗಳೂರು : ಶಾಲೆ ಮುಗಿಸಿ ಮನೆಗೆ ತೆರಳಲು ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಲಾರಿಯೊಂದು ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ ಸಮೀಪದ ನೇರಳಕಟ್ಟೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ನೇರಳಕಟ್ಟೆ ನಿವಾಸಿ, ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿ ಫಾತಿಮಾ ಇಝಾ ಇಲ್ಯಾಸ್ ಎಂದು ಗುರುತಿಸಲಾಗಿದೆ.

ಸಂಜೆ ಶಾಲೆ ಬಿಟ್ಟ ಬಳಿಕ ಫಾತಿಮಾ ಬಸ್ಸಿನಲ್ಲಿ ನೇರಳಕಟ್ಟೆಗೆ ಬಂದಿಳಿದಿದ್ದಳು. ಬಳಿಕ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಅತಿವೇಗವಾಗಿ ಬಂದ ಲಾರಿ ಆಕೆಗೆ ಡಿಕ್ಕಿ ಹೊಡೆದಿದೆ.

ಲಾರಿಯ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.