ಬಂಟ್ವಾಳ: ಬಂಟ್ವಾಳ ತಾಲೂಕು ಕಚೇರಿಗೆ ಬುಧವಾರ ಮಧ್ಯಾಹ್ನ ಲೋಕಾಯುಕ್ತ ದಾಳಿ ನಡೆದಿದ್ದು, ಉಪತಹಶೀಲ್ದಾರ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಹಾಗೂ ಮಧ್ಯವರ್ತಿ ವಾಮದಪದವು ನಿವಾಸಿ ಗಣೇಶ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ:

ಸಜೀಪಮುನ್ನೂರಿನ ಪುಷ್ಪರಾಜ್ ಎಂಬವರು ತಾಯಿಯ ಪೌತಿ ಖಾತೆಯ ವಿಚಾರವಾಗಿ 2021 ನೇ ಇಸವಿಯಲ್ಲಿ ಬಂಟ್ವಾಳ ತಾಲೂಕು ಕಛೇರಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದು, ಜಿಲ್ಲಾಧಿಕಾರಿಯವರ ನ್ಯಾಯಾಲಯವು ಜಮೀನು ಮಂಜೂರಾತಿ ಆದೇಶವನ್ನು ಪುರಸ್ಕರಿಸಿತ್ತು.

ಅದರಂತೆ ,  ಸಹಾಯಕ ಆಯುಕ್ತರ ನ್ಯಾಯಾಲಯವೂ ಸಜೀಪ ಮುನ್ನೂರು ಗ್ರಾಮದ ಸರ್ವೆ ನಂಬ್ರ 102/1 ರಲ್ಲಿ ಪಿರ್ಯಾದಿದಾರರ ಪೌತಿ ಖಾತೆ ಮಾಡಿ ಕೊಡಲೂ ತಹಶೀಲ್ದಾರ್ ಬಂಟ್ವಾಳ ರವರಿಗೆ ಆದೇಶ ನೀಡಿತ್ತು.

ಆದರೆ ಕಳೆದ ಎಪ್ರಿಲ್ 2025 ರಿಂದ ಬಂಟ್ವಾಳ ತಹಶೀಲ್ದಾರ್ ಕಛೇರಿಯಲ್ಲಿ ಈ ಫೈಲ್ ಅನ್ನು ಬಾಕಿ ಇಟ್ಟುಕೊಂಡಿದ್ದು, ಈ ಬಗ್ಗೆ ಬಂಟ್ವಾಳ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ಮತ್ತು ಕೇಸ್ ವರ್ಕರ್ ಸಂತೋಷ್ ರವರಲ್ಲಿ ವಿಚಾರಿಸಿದಾಗ ಪೌತಿ ಖಾತೆ ಕೆಲಸದ ಕೇಸ್ ವರ್ಕರ್ ಸಂತೋಷ್ ರವರು ಪೌತಿ ಖಾತೆ ಮಾಡಲೂ ರೂ 1500/- ಹಾಗೂ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ರವರು ಪೌತಿ ಖಾತೆ ಮಾಡಿಕೊಡಲು ತಹಶೀಲ್ದಾರರಿಗೆ ರೂಪಾಯಿ 20000/- ನೀಡಬೇಕು ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.

ಈ ಬಗ್ಗೆ ಪಿರ್ಯಾದಿದಾರರು ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ರವರು ಮತ್ತು ಕೇಸ್ ವರ್ಕರ್ ಸಂತೋಷ್ ರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

ಇಂದು  ಅಧಿಕಾರಿಗಳು ದಾಳಿ ನಡೆಸಿದ್ದು, ಬಿ.ಸಿ.ರೋಡಿನ ದೇವಸ್ಥಾನವೊಂದರ ಬಳಿ ಮಧ್ಯವರ್ತಿಯ ಮೂಲಕ ಹಣ ವ್ಯವಹಾರ ನಡೆಯುವ ಸಂದರ್ಭದಲ್ಲಿ ಪ್ರಕರಣವನ್ನು ಬೇಧಿಸಲಾಗಿದೆ. ಪ್ರಕರಣಕ್ಕೆ‌ ಸಂಬಂಧಿಸಿ ಬಂಟ್ವಾಳ ತಾಲೂಕು ತಹಸೀಲ್ದಾರರ ಪಾತ್ರದ ಕುರಿತು ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಡಿವೈಎಸ್ಪಿಗಳಾದ ಗಾನಾ ಪಿ.ಕುಮಾರ್, ಸುರೇಶ್ ಕುಮಾರ್, ಇನ್ಸ್‌ಪೆಕ್ಟರ್ ಚಂದ್ರಶೇಖರ, ಭಾರತಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.