ಮಂಗಳೂರು: ಕಳೆದ ಕೆಲ ತಿಂಗಳಿನಿಂದ ಕರಾವಳಿ ಭಾಗದ ಕಾನೂನು ಸುವ್ಯವಸ್ಥೆ ಹದಗೆಟ್ಡಿದೆ. ಈ ಹೊತ್ತಲ್ಲಿ ಸುಹಾಸ್ ಹತ್ಯೆ ಹಾಗೂ ಆ ಬಳಿಕ ಕೆಲ ಬೆಳವಣಿಗೆ ನಡೆದಿದೆ. ಹೀಗಾಗಿ ಬಿಜೆಪಿ ನಿಯೋಗ ಮಂಗಳೂರಿಗೆ ಭೇಟಿ ಕೊಟ್ಟಿದೆ. ಹಿಂದೂ ಕಾರ್ಯಕರ್ತರು, ಮುಖಂಡರ ಜೊತೆ ಸಮಾಲೋಚನೆ ಮಾಡಿದ್ದೇವೆ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ನಿಯೋಗದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಡಿಸಿ, ಎಸ್ಪಿ, ಕಮಿಷನರ್ ಜೊತೆಗೂ ಸಮಾಲೋಚನೆ ಮಾಡಿದ್ದೇವೆ. ಸುಹಾಸ್ ಹತ್ಯೆ ಬಳಿಕ ಕಾನೂನು ಸುವ್ಯವಸ್ಥೆ ಹೆಸರಲ್ಲಿ ಪೊಲೀಸ್ ಇಲಾಖೆ ಮೂಲಕ ಕಾಂಗ್ರೆಸ್ ಗೂಂಡಾವರ್ತನೆ ಮಾಡ್ತಿದೆ. ಸುಳ್ಯ ಹಾಗೂ ಬೇರೆ ಪ್ರದೇಶಗಳಲ್ಲಿ ನಮ್ಮ ಕಾರ್ಯಕರ್ತರು, ಮುಖಂಡರ ಟಾರ್ಗೆಟ್ ಮಾಡಲಾಗ್ತಿದೆ. ರಾತ್ರಿ ಮನೆಗೆ ಹೋಗಿ ಬಾಗಿಲು ತಟ್ಟಿ ಭಾವಚಿತ್ರ ತೆಗೆಯಲಾಗ್ತಿದೆ. ಮನೆಯಲ್ಲಿ ರಿವಾಲ್ವರ್ ತೋರಿಸಿ ಪೊಲೀಸರು ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೋಮು ನಿಗ್ರಹ ದಳ ರಚನೆ ಮಾಡಿದ ಬಳಿಕ ಹೀಗಾಗ್ತಿದೆ. ಕಾಂಗ್ರೆಸ್ ನಿಂದ ಹರಿಪ್ರಸಾದ್ ನೇತೃತ್ವದಲ್ಲಿ ಸತ್ಯ ಶೋಧನ ಸಮಿತಿ ಮಾಡಿದ್ದಾರೆ. ಕೋಮು ನಿಗ್ರಹ ದಳದ ಉದ್ದೇಶವೇ ಹಿಂದೂ ಕಾರ್ಯಕರ್ತರ ಟಾರ್ಗೆಟ್. ದ.ಕ ಜಿಲ್ಲೆ ಸಂಘಟನೆಗಳ ಭದ್ರಕೋಟೆ, ಇಲ್ಲಿ ಕಾರ್ಯಕರ್ತರ ಟಾರ್ಗೆಟ್ ಮಾಡುವ ಷಡ್ಯಂತ್ರ ಇದೆ. ಸುಹಾಸ್ ಹತ್ಯೆಯಲ್ಲಿರೋ ಬುರ್ಖಾಧಾರಿಗಳ ತನಿಖೆ ಮಾಡಿಲ್ಲ ಎಂದರು.
ಮುಸಲ್ಮಾನ ತೀರಿಕೊಂಡರೆ ರಾತ್ರೋರಾತ್ರಿ ಹಿಂದೂ ಕಾರ್ಯಕರ್ತರ ಮೇಲೆ ಎಫ್ಐಆರ್ ಆಗುತ್ತೆ. ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಕೆಲಸ ಮಾಡ್ತಿದೆ. ಸುಹಾಸ್ ಕೇಸ್ ಎನ್ಐಎಗೆ ಕೊಡಲು ರಾಜ್ಯಪಾಲರ ಭೇಟಿ ಮಾಡಿದ್ವಿ, ಆದರೆ ರಾಜ್ಯ ಸರ್ಕಾರ ಯಾವುದಕ್ಕೂ ಮಣಿದಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಈಗ ಎನ್ಐಎಗೆ ತನಿಖೆಗೆ ಒಪ್ಪಿಸಿದೆ, ಅದನ್ನ ಸ್ವಾಗತಿಸ್ತೇನೆ. ಬಿಜೆಪಿ ಅಥವಾ ಹಿಂದೂ ಸಂಘಟನೆಗಳು ಕಾನೂನು ಬಾಹಿರ ಕೆಲಸ ಮಾಡ್ತಿಲ್ಲ ಎಂದರು.
ಪೊಲೀಸರು ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಕೆಲಸ ಮಾಡಿದ್ರೆ, ಆರ್ ಸಿಬಿ ವಿಜಯೋತ್ಸವದಲ್ಲಿ ಅಧಿಕಾರಿಗಳ ತಲೆ ದಂಡ ಆದಂತೆ ಆಗುತ್ತೆ. ಮಂಗಳೂರು ಕಮಿಷನರ್, ಎಸ್ಪಿಗೂ ಅದನ್ನೇ ಹೇಳಿದ್ದೇವೆ. ದೇಶದಲ್ಲಿ ನ್ಯಾಯಾಲಯದ ವ್ಯವಸ್ಥೆ ಇದೆ, ನಮ್ಮದು ರಾಷ್ಟ್ರೀಯ ಪಕ್ಷ. ಹಾಗಾಗಿ ಕಾರ್ಯಕರ್ತರ ಬೆದರಿಸೋದನ್ನ ಬಿಡಿ ಅಂತ ಪೊಲೀಸರಿಗೆ ಹೇಳಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ.
ದ.ಕ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಖುಷಿಗಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೀತಿದೆ. ಎಲ್ಲಾ ಹತ್ಯೆಗಳನ್ನ ಹಿಂದೂ ಮುಸ್ಲಿಂ ಅಂತ ಬಣ್ಣ ಕೊಟ್ಟರೆ ಆಗಲ್. ಇದರಿಂದ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದರೆ ರಾಜ್ಯ ಸರ್ಕಾರವೇ ಹೊಣೆ. ಪ್ರಭಾಕರ ಭಟ್ ಅವರು ನಾಲ್ಕು ಗೋಡೆಯ ಮಧ್ಯೆ ಮಾತನಾಡಿರೋದಕ್ಕೆ ಎಫ್ಐಆರ್ ಮಾಡ್ತಾರೆ. ಅವರು ಜಾಮೀನು ತೆಗೊಂಡರೂ ಅವರಿಗೆ ಮತ್ತೆ ನೊಟೀಸ್ ಕೊಟ್ಟಿದ್ದಾರೆ. ಐವನ್ ಡಿಸೋಜಾ ಬಾಂಗ್ಲಾದೇಶ ಮಾದರಿಯಲ್ಲಿ ನುಗ್ಗಿ ಹೊಡೀತಿವಿ ಅಂದ್ರೂ ಕೇಸ್ ಆಗಿಲ್ಲ.
ಪೊಲೀಸ್ ಇಲಾಖೆ ಆಡಳಿತ ಪಕ್ಷದ ಕೈಗೊಂಬೆ ಆಗಬಾರದು. ಮುಂದೆ ಆ ರೀತಿ ಆಗೋದಿಲ್ಲ ಅಂತ ಅವರು ಭರವಸೆ ಕೊಟ್ಡಿದ್ದಾರೆ. ರಾಜಕೀಯ ನಾಯಕತ್ವ ಫೇಲ್ ಆದಾಗ ಅಧಿಕಾರಿಗಳನ್ನ ಹೊಣೆ ಮಾಡ್ತಾರೆ. ಬೆಂಗಳೂರು ಮತ್ತು ದ.ಕ ಜಿಲ್ಲೆಯಲ್ಲಿ ಆಗಿರೋದು ಅದೇ. ಉಸ್ತುವಾರಿ ಸಚಿವರು ಬಂದಾಗಲೇ ಅವರಿಗೆ ಸುಹಾಸ್ ಶೆಟ್ಟಿ ಮನೆಗೆ ಹೋಗದಂತೆ ತಡೆದರು. ಇಲ್ಲಿ ಲವ್ ಜಿಹಾದ್, ಮರಳು ಮಾಫಿಯಾ, ಗೋ ಹತ್ಯೆ ನಡೀತಾ ಇದೆ. ಇದನ್ನ ಪೊಲೀಸರು ನಿರ್ವಹಿಸಿದ್ರೆ ನಮ್ಮ ಕಾರ್ಯಕರ್ತರು ಬೀದಿಗೆ ಇಳಿಯಲ್ಲ ಎಂದರು.

