ಬಂಟ್ವಾಳ: ತಾಲೂಕಿನಾದ್ಯಂತ ಮಳೆಯ ಅವಾಂತರ ಮುಂದುವರಿದಿದ್ದು ಗುಡ್ಡಕುಸಿತ, ಆವರಣಗೋಡೆ ಕುಸಿದಂತಹಾ ಘಟನೆಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ವೀರಕಂಬ ಗ್ರಾಮದ ವ್ಯಾಪ್ತಿಯ ಕಲ್ಲಡ್ಕ-ವಿಟ್ಲ ಮುಖ್ಯ ರಸ್ತೆಯ ಕೆಲಿಂಜ ನಡು ವಲಚ್ಚಿಲ್ ಎಂಬಲ್ಲಿ ರಸ್ತೆ ಬದಿಯಲ್ಲಿ ಮಣ್ಣು ಕುಸಿದಿದ್ದು. ರಸ್ತೆ ಬದಿಯಲ್ಲಿ ಬೃಹತ್ ಗಾತ್ರ ಬಂಡೆ ಕಲ್ಲು ಅಪಾಯಕಾರಿಯಾದ ಸ್ಥಿತಿಯಲ್ಲಿದ್ದ ಹಿನ್ನೆಲೆ ಹತ್ತಿರದ ಮನೆಯಲ್ಲಿ ವಾಸ್ತವ್ಯವಿದ್ದ ಸುಶೀಲ ಎಂಬವರನ್ನು, ವಿಟ್ಲ ಕಂದಾಯ ನಿರೀಕ್ಷಕ ಎಂ ಎನ್ ರವಿ ಯವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಕರೋಪಾಡಿ ಗ್ರಾಮದ ಕಲ್ಕಾರು ಎಂಬಲ್ಲಿನ ರಹಮತ್ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿರುತ್ತದೆ.

 

 

ಅಮ್ಟಾಡಿ ಬಾಂಬಿಲ ರಸ್ತೆಯಲ್ಲಿ ಮಣ್ಣುಕುಸಿತಗೊಂಡ ಹಿನ್ನೆಲೆ ರಸ್ತೆ ಸಂಚಾರ ಬಂದ್ ಆಗಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಅರುಣ್ ಪ್ರಕಾಶ್ ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಸಲಾಯಿತು. ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆ ಎಂಬಲ್ಲಿ ಪಿ. ಬಿ ಅಬೂಬಕ್ಕರ್ ರವರ ಮನೆಯ ಶೌಚಾಲಯ ಮತ್ತು ಸ್ನಾನಗೃಹಕ್ಕೆ ಮಳೆಗಾಳಿಯಿಂದ ಹಾನಿಯಾಗಿರುತ್ತದೆ. ತೆಂಕಕಜೆಕಾರು ಗ್ರಾಮದ ಬಾರ್ದೋಟ್ಟು ಎಂಬಲ್ಲಿನ ಶ್ರೀಮತಿ ಆಯಿಷಾ ಪಿ ಎಸ್ ಎಂಬವರಿಗೆ ಸೇರಿದ ದನದ ಹಟ್ಟಿ ಹಾಗೂ ಕಾಂಪೌಂಡ್ ಕುಸಿದು ಬಿದ್ದಿರುತ್ತದೆ.

ಮೇರಮಜಲು ಗ್ರಾಮದ ಅಬ್ಬೆಟ್ಟು ಎಂಬಲ್ಲಿ ನೋಣಯ ಎಂಬವರ ಮನೆ ಗೋಡೆಗೆ ಗುಡ್ಡ ಕುಸಿದು ಭಾಗಶಃ ಹಾನಿ ಸಂಭವಿಸಿದೆ. ಸಂಗಬೆಟ್ಟು ಗ್ರಾಮದ ಕಂಡಿಗ ಎಂಬಲ್ಲಿನ ರೋಶನ್ ಸಿಕ್ವೆರಾ ರವರ ಶೌಚಾಲಯ ಕಟ್ಟಡ ಕುಸಿದಿರುತ್ತದೆ. ಬಿಮೂಡ ಗ್ರಾಮದ ಉಮಾ ಎಸ್ ಭಟ್ ರವರ ವಾಸ್ತವ್ಯದ ಮನೆಗೆ ಬರೆ ಜರಿದು ಬಿದ್ದು ಆಂಶಿಕ ಹಾನಿಯಾಗಿದೆ.ಪುಣಚ ಗ್ರಾಮದ ವಾರಿಜ ರವರ ವಾಸ್ತವ್ಯದ ಮನೆಗೆ ಗುಡ್ಡ ಕುಸಿದು ಹಾನಿಯಾಗಿದ್ದು, ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಪಾಣೆಮಂಗಳೂರು ಗ್ರಾಮದ ಬೋರುಗುಡ್ಡೆ ಎಂಬಲ್ಲಿ ಮಹಾಬಲ ಎಂಬವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿರುತ್ತದೆ. ವಿಟ್ಲ ಪಡ್ನೂರು ಗ್ರಾಮದ ಎರ್ಮೆನಿಲೆ ಎಂಬಲ್ಲಿ ಶೀನ ಪರವ ರವರ ಮನೆಯ ಹಿಂಭಾಗದಲ್ಲಿ ಗುಡ್ಡ ಕುಸಿದಿದ್ದು, ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಗೊಳಿಸಲಾಗಿದೆ. ಕಡೂರು ಕಾಞಂಗಾಡ್ ರಾಜ್ಯ ಹೆದ್ದಾರಿಯ ಪಾತ್ರ ತೋಟ ಎಂಬಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳವನ್ನು ವಿಟ್ಲ ಪೋಲೀಸ್ ಹಾಗೂ ವೀರಕಂಭ ಪಂಚಾಯತ್ ಉಪಾಧ್ಯಕ್ಷರು, ಸಿಬ್ಬಂದಿಯವರೊಂದಿಗೆ ಪರಿಶೀಲನೆ ನಡೆಸಲಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಹಿಸಲಾಗಿದೆ.

ಮೇರಮಜಲು ಗ್ರಾಮದ ಕಲ್ಲಿಮಾರು ಪೂವಪ್ಪ ಮುಂಡಾಲ ರ ಮನೆ ಹತ್ತಿರ ದ ಬರೆ ಕುಸಿದಿರು ರುತ್ತದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾರ್ನೆಮಿಗುಡ್ಡೆಯ ಮುನೀರ ಎಂಬುವರ ಕಾಂಪೌಂಡ್ ಕುಸಿದು ಅಪಾಯ ಎದುರಾಗಿದೆ. ತಾಲೂಕಿನ ಪಿಲಿಮೊಗರು ಗ್ರಾಮದ ಸುನ್ನಡಪೊಲಿ ಎಂಬಲ್ಲಿ ಗುಡ್ಡ ಜರಿದು ಬುಡೋಳಿ ಗ್ರಾಮದಲ್ಲಿ ಹಾದು ಹೋಗುತ್ತಿರುವ ತೋಡಿನ ಮೇಲೆ ಬಿದ್ದು ಸಮೀಪದಲ್ಲಿರುವ ತೋಟಗಳಿಗೆ ನೀರು ನುಗ್ಗಿದ್ದು, ಜೆಸಿಬಿ ಯಂತ್ರದಿಂದ ತೋಡು ಬಿಡಿಸಿ ಕೊಡುವ ಕಾರ್ಯ ನಡೆದಿದೆ. ಮೇರಮಜಲು ಗ್ರಾಮದ ಕಂಗಿತೋಟ ಮೀನಾಕ್ಷಿ ರವರ ಮನೆ ಗೋಡೆ ಜರಿದಿರುತ್ತದೆ.

ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಕುಕ ಎಂಬಲ್ಲಿ ಗುಡ್ಡೆ ಜರಿದು ರಸ್ತೆ ಸಂಪೂರ್ಣ ಬಂದ್ ಆಗಿದ್ದು ಗ್ರಾಮ ಪಂಚಾಯತ್ ವತಿಯಿಂದ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಮೂಡು ಪಡುಕೋಡಿ ಗ್ರಾಮ ವ್ಯಾಪ್ತಿಯ ಗುಂಪಕಲ್ಲು ಸೈನಾಜ್ ರವರ ವಾಸ್ತವ್ಯದ ಕಚ್ಚಾ ಮನೆಯ ಗೋಡೆ ಬಿದ್ದಿರುತ್ತದೆ. ಮನೆಯಲ್ಲಿರುವವರನ್ನು ಸುರಕ್ಷಿತ ಪ್ರದೇಶ/ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಬಿಳಿಯೂರು ಗ್ರಾಮದ ಕುಕ್ಕನೋಟು ಕರುವೇಲು ಎಂಬಲ್ಲಿ ಅಬ್ದುಲ್ ರಝಕ್ ರವರ ಮನೆಯ ಬದಿ ಬರೆ ಜರಿದಿರುತ್ತದೆ.

ಮಣಿನಾಲ್ಕೂರು ಗ್ರಾಮದ ಕೊಟ್ಟುಂಜ ಮಜಲು ಎಂಬಲ್ಲಿ ಸುಮಾರು 4 ಮನೆಗಳಿಗೆ ಸಂಪರ್ಕಿಸುವ ರಸ್ತೆಗೆ ಮಳೆ ನೀರು ನಿಂತಿರುತ್ತದೆ. ಮಂಚಿ ಗ್ರಾಮದ ಕಲ್ಲಮರೈ ಮಸೀದಿ ಬಳಿ ಆಸ್ಯಮ್ಮ ರವರ ಮನೆಗೆ ಹಾನಿ ಆಗಿರುವ ಬಗ್ಗೆ ಪಿಡಿಓ ರವರ ಜೊತೆ ಜಂಟಿ ಸ್ಥಳ ಪರಿಶೀಲಿಸಲಾಯಿತು. ಇವರನ್ನು ಇವರ ಮಗಳ ಮನೆಗೆ ಸ್ಥಳಾಂತರ ಮಾಡಿಸಲಾಯಿತು. ಚೆನ್ನೈತ್ತೋಡಿ ಗ್ರಾಮದ ತಿಮರಡ್ಡ ಎಂಬಲ್ಲಿ ನಾರಾಯಣ ಸೇವಂತರವರ ತೋಟಕ್ಕೆ ಮರ ಬಿದ್ದು ಹಾನಿಯಾಗಿರುತ್ತದೆ.

 

ಕನ್ಯಾನ ಗ್ರಾಮದ ಮಂಡಿಯೂರು ಪ್ರದೇಶದಲ್ಲಿ ಭಾರೀ ಶಬ್ದ ಕೇಳಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಶಬ್ದದ ತೀವ್ರತೆಗೆ ಸಣ್ಣ ಕಂಪನ ಉಂಟಾಗಿದ್ದು, ಯಾವುದೇ ಅಪಾಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮನೆಯಲ್ಲಿದ್ದ ಮಹಿಳೆಯರು ಮನೆಯಿಂದ ಹೊರಗೆ ಓಡಿಬಂದಿದ್ದು, ಬಸ್ ನಿಲ್ದಾಣದಲ್ಲಿ‌ ನಿಂತಿದ್ದಯುವಕರಿಗೂ ಶಬ್ದ ಕೇಳಿಸಿದೆ ಎನ್ನುತ್ತಾರೆ.

ವಿಷಯ ತಿಳಿದ ಗ್ರಾಮಕರಣಿಕ ಅನಿಲ್ ಹಾಗೂ ಪಂಚಾಯತ್ ಸಿಬ್ಬಂದಿ, ಗ್ರಾ.ಪಂ ಸದಸ್ಯರ ಜೊತೆ ಸೇರಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶಬ್ದ ಕೇಳಿದ ಮನೆಗಳಲ್ಲಿ ಯಾವುದೇ ಬಿರುಕು ಬಿಟ್ಟ ರೀತಿಯ ಘಟನೆಗಳು ಕಂಡು ಬಂದಿಲ್ಲ, ಶಬ್ದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಕಂದಾಯ ಇಲಾಖಾ ಪ್ರಕಟಣೆ ತಿಳಿಸಿದೆ.