ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಚಂಪಾಷಷ್ಠಿ ಮಹೋತ್ಸವದ ಸಂಭ್ರಮದಲ್ಲಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿದೆ. ನ.16ರಿಂದ ಮೊದಲ್ಗೊಂಡು ಡಿ.2ರವರೆಗೆ ಚಂಪಾಷಷ್ಠಿ ಮಹೋತ್ಸವ ಜರಗಲಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ವ್ಯವಸ್ಥೆಗಳನ್ನು ಕೈಗೊಳ್ಳಲು ನಿರ್ದೇಶನಗಳನ್ನು ನೀಡಲಾಗಿದೆ.

ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೇಟೆಯಲ್ಲಿನ ಬೀದಿ ದೀಪಗಳನ್ನು ದೇವಸ್ಥಾನದ ವತಿಯಿಂದ ರಿಪೇರಿ ನಡೆಸಲಾಯಿತು. ದೇಗುಲ ಸಮೀಪದ ಪ್ರಮುಖ ಜಂಕ್ಷನ್‌ಗಳ ಹೈಮಾಸ್ಟ್ ದೀಪಗಳನ್ನೂ ನಿರ್ವಹಣೆ ಮಾಡಲಾಗಿದೆ. ಜಾತ್ರೆಯ ಅಂಗವಾಗಿ ಗುಡಿ-ಗೋಪುರ ಇತರ ಕಡೆಗಳಲ್ಲೂ ಪೈಂಟಿಂಗ್ ಕೆಲಸ ನಡೆಯುತ್ತಿದ್ದು ರಥ ಕಟ್ಟುವ ಕೆಲಸವೂ ಆರಂಭಗೊಂಡಿದೆ.

ಸ್ವಚ್ಛತೆ ಅಂಗವಾಗಿ ಆರಂಭಿಕ ಕೆಲಸಗಳು ಆರಂಭಗೊಂಡಿದೆ. ಹೆಚ್ಚುವರಿ ತಾತ್ಕಾಲಿಕ ಪೌರ ಕಾರ್ಮಿಕರ ನಿಯೋಜಿಸಿ ಸ್ವಚ್ಛತಾ ಕಾರ್ಯಕ್ಕೆ ಸಿದ್ಧತೆ ರೂಪಿಸಲಾಗಿದೆ. ಪಾರ್ಕಿಂಗ್ ಮಾಡಲು ಗುರುತಿಸಲಾದ ಜಾಗದಲ್ಲಿ ಸಮತಟ್ಟು ಮಾಡುವ ಕೆಲಸ, ತಾತ್ಕಾಲಿಕ ಶೌಚಾಲಯಗಳು, ವಿಶ್ರಾಂತಿ ತಾಣಗಳು, ತಾತ್ಕಾಲಿಕ ಆರೋಗ್ಯ ಕೇಂದ್ರ, ಕುಮಾರಧಾರ ದಿಂದ ರಥಬೀದಿಯಾಗಿ ದೇಗುಲದವರೆಗೆ 2 ಬದಿಗಳಲ್ಲಿ ಬೆಳೆದಿರುವ ಗಿಡ ಗಂಟಿ ತೆರವು ಕಾರ್ಯವೂ ಆರಂಭಿಕ ಹಂತದಲ್ಲಿದೆ. ಅಂಗಡಿಗುಡ್ಡೆಯಲ್ಲಿ ಜರ್ಮನ್‌ಟೆಂಟ್ ಮೂಲಕ ಅನ್ನಛತ್ರ ನಿರ್ಮಾಣದ ಯೋಜನೆ ರೂಪಿಸಲಾಗಿದೆ.

ಜಾತ್ರೆಯ ವೇಳೆ ಸುರಕ್ಷತೆ, ಭದ್ರತೆ ಹಿನ್ನಲೆಯಲ್ಲಿ ಹೆಚ್ಚುವರಿ ಸಿಸಿ ಕೆಮರಾಅಳವಡಿಕೆಗೆ ಕ್ರಮ ವಹಿಸಲಾಗಿದೆ. ಈಗಾಗಲೇ ದೇವಸ್ಥಾನದ ವತಿಯಿಂದ 193 ಶಾಶ್ವತ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದ್ದು, ವ್ಯವಸ್ಥಿತವಾಗಿದೆ. ಜಾತ್ರೆ ಅಂಗವಾಗಿ ಹೆಚ್ಚುವರಿ 83 ಸಿಸಿ ಕೆಮರಾ ಅಳವಡಿಕೆಗೆ ಯೋಜಿಸಲಾಗಿದೆ. ಪೊಲೀಸ್ ಇಲಾಖೆ ಸೂಚಿಸುವ ಕಡೆಗಳಲ್ಲಿ ಹೆಚ್ಚುವರಿ ಸಿಸಿ ಕೆಮರಾ ಅಳವಡಿಸಲಾಗುತ್ತದೆ. ದೇವರ ಅವಭ್ರಥೋತ್ಸವ ಮೊದಲು ಕುಮಾರಧಾರಾ ನದಿಯ ಹೂಳು ತೆರವು ಕಾರ್ಯ ನಡೆಯಬೇಕಾಗಿದೆ.