ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕೆಪಿಸಿಸಿ ನಿಯೋಗ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ಸತ್ಯಾಸತ್ಯತೆ ಹಾಗೂ ನೈಜತೆಯನ್ನು ತಿಳಿದುಕೊಳ್ಳಲು ಭೇಟಿ ನೀಡಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸೀರ್ ಹುಸೇನ್ ನೇತೃತ್ವದ ನಿಯೋಗವಾಗಿದ್ದು, ನಿಯೋಗದಿಂದ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸೀರ್ ಹುಸೇನ್ ಹೇಳಿಕೆ ನೀಡಿದ್ದಾರೆ. ಈ ಭಾಗದಲ್ಲಿ ಶಾಂತಿ, ಸೌಹಾರ್ದತೆ, ಪ್ರಗತಿಗಾಗಿ ನಮ್ಮ ನಿಯೋಗ ಕೆಲಸ ಮಾಡುತ್ತಿದೆ. ಇಲ್ಲಿಗೆ ಬಂದ ತಕ್ಷಣ ಪಾರ್ಟಿ ಲೀಡರ್, ನಾಗರಿಕರು, ಅಧಿಕಾರಿಗಳು, ಜನಸಾಮಾನ್ಯರನ್ನು ಭೇಟಿ ಮಾಡಿದ್ದೇವೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲಾ ಧರ್ಮದ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದ್ದೇವೆ. ಎಲ್ಲಾ ಕಡೆಯಿಂದಲೂ ಅಭಿಪ್ರಾಯ ಪಡೆದಿದ್ದೇವೆ.
ಈ ಹತ್ಯೆಗಳಿಗೆ ಕಾರಣ ಪತ್ತೆ ಹಚ್ಚುವ ಕೆಲಸ ಮಾಡಿದ್ದೇವೆ. ಮುಂದಿನ ವಾರದಲ್ಲಿ ಈ ಬಗ್ಗೆ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಇಲ್ಲಿನ ವಾತಾವರಣ ಸುಧಾರಿಸಲು ಕ್ರಮ ಕೈಗೊಳ್ಳುತ್ತೇವೆ. ಕಾಲೇಜುಗಳಲ್ಲಿ ಅಡ್ಮಿಷನ್ ಗೆ ನೋಂದಣಿ ಮಾಡಿಕೊಂಡವರು ರದ್ದು ಮಾಡುತ್ತಿದ್ದಾರೆ. ಏಳು ಗಂಟೆ ಬಳಿಕ ಅಂಗಡಿಗಳೆಲ್ಲಾ ಬಂದ್ ಆಗ್ತಿದೆ. ಕೊಲೆ ಮಾಡಿದವರು ಯಾವುದೇ ಜಾತಿಯವನು ಆಗಿದ್ರು ಅಂತವರಿಗೆ ಜಾಗವಿಲ್ಲ. ಹಿಂಸೆಗೆ ಇಲ್ಲಿ ಅವಕಾಶ ಮಾಡಿಕೊಡಲ್ಲ. ಆಡಳಿತಾತ್ಮಕವಾಗಿ ಏನೆಲ್ಲಾ ವೈಫಲ್ಯ ಆಗಿದೆ ಎಂಬ ಬಗ್ಗೆಯು ತಿಳಿದುಕೊಂಡಿದ್ದೇವೆ ಎಂದರು.

