ಮಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ಬರ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಗ್ಗೆ ವಿರೋಧ ಪಕ್ಷದ ಟೀಕೆಗೆ ಪ್ರತಿಕ್ರಿಯಿಸಿದ ಖಾದರ್, ವೈಮಾನಿಕ ಮೌಲ್ಯಮಾಪನವು ಹಾನಿಯ ವ್ಯಾಪ್ತಿಯ ವಿಶಾಲ ಚಿತ್ರವನ್ನು ಕಡಿಮೆ ಸಮಯಾವಕಾಶದಲ್ಲಿ ಒದಗಿಸುತ್ತದೆ ಎಂದು ತಿಳಿಸಿದರು.

ಭಾನುವಾರ ಪಡೀಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರತೀಯೊಂದು ಬರ ಪೀಡಿತ ಪ್ರದೇಶಗಳನ್ನು ಭೇಟಿ ನೀಡಿ ತಪಾಸಣೆ ಮಾಡುವುದರ ಬದಲಾಗಿ, ವೈಮಾನಿಕ ಸಮೀಕ್ಷೆಯು ಬರ ಪೀಡಿತ ಪ್ರದೇಶ ಮತ್ತು ಉಂಟಾದ ಹಾನಿಯ ಸಂಪೂರ್ಣ ಚಿತ್ರಣವನ್ನು ಕ್ಷಣ ಮಾತ್ರದಲ್ಲಿ ನೀಡುತ್ತದೆ. ಇದು ಚಿಕ್ಕ ಮಗುವಿಗೂ ಅರ್ಥವಾಗುವಂತಹ ವಿಷಯ” ಎಂದು ಅವರು ಹೇಳಿದರು.

ಪ್ರಕೃತಿ ವಿಕೋಪಗಳು ಮತ್ತು ಪರಿಹಾರ ಕ್ರಮಗಳ ವಿಚಾರದಲ್ಲಿ ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕೀಯ ಮಾಡುವುದು ಸರಿಯಲ್ಲ ಎಂದ ಖಾದರ್, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಪರಿಹಾರ ಒದಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಮುಕ್ತ ಮನಸ್ಸಿನಿಂದ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ಜನರ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು. ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು‌ ಯಾವುದೇ ಕಾರಣಕ್ಕೂ ಅಡ್ಡಿಯಾಗಬಾರದು ಎಂದು ಅವರು ಹೇಳಿದರು.

ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯು ಕರಾವಳಿ ಪ್ರದೇಶದ ನಿರ್ದಿಷ್ಟ ಸಮಸ್ಯೆಗಳನ್ನು ಚರ್ಚಿಸಲು ಪ್ರಮುಖ ವೇದಿಕೆಯನ್ನು ಒದಗಿಸುವ ನಿರೀಕ್ಷೆಯಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ನಾಡಿನ ಪ್ರಮುಖರೊಂದಿಗೆ ಸಮಾಲೋಚನೆ ಸಿದ್ಧವಾಗಿದ್ದು ಹಲವಾರು ವರ್ಷಗಳಿಂದ ಬಾಕಿ ಇರುವ ಕರಾವಳಿಯ ಬೇಡಿಕೆಗಳು ಮತ್ತು ಅಭಿವೃದ್ಧಿ ಪ್ರಸ್ತಾವನೆಗಳನ್ನು ಸಂಪುಟದ ಮುಂದೆ ತರಲಾಗುವುದು ಎಂದರು.