ಮಂಗಳೂರು: ಮಂಗಳೂರು ಹೊರವಲಯದ ಬಜಪೆ ಸಮೀಪದ ಕಿನ್ನಿಪದವು ಎಂಬಲ್ಲಿ ಸಂಜೆ ದುಷ್ಕರ್ಮಿಗಳ ಗುಂಪೊಂದು ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಸುಹಾಸ್ ಶೆಟ್ಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಕೊಲ್ಲಲ್ಪಟ್ಟ ವ್ಯಕ್ತಿಯನ್ನು ಸುಹಾಸ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ರೌಡಿ ಪಟ್ಟಿಯಲ್ಲಿದ್ದನು ಮತ್ತು ೨೦೨೨ರ ಜುಲೈ ೨೮ರಂದು ಸುರತ್ಕಲ್ನಲ್ಲಿ ನಡೆದಿದ್ದ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಫಾಜಿಲ್ ಹತ್ಯೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಗುಂಪೊಂದು ಸಾರ್ವಜನಿಕರೆದುರೇ ತಲವಾರುಗಳಿಂದ ದಾಳಿ ನಡೆಸಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದೆ. ಈ ಭೀಕರ ಹತ್ಯೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿವೆ.
ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದಲ್ಲಿ ಸಕ್ರಿಯನಾಗಿದ್ದು, ಗೋರಕ್ಷಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನು. ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳಲ್ಲಿಯೂ ಈತ ಆರೋಪಿಯಾಗಿದ್ದನು. ಇಂದು ರಾತ್ರಿ ಸುಮಾರು ೮.೩೦ರ ವೇಳೆಗೆ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಭೀಕರವಾಗಿ ಕೊಲ್ಲಲಾಗಿದೆ. ಈ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

