ಮಂಗಳೂರು: ಕರ್ನಾಟಕಕ್ಕೆ ಒಬ್ಬ ಯೋಗಿ ಆದಿತ್ಯನಾಥ್ ಬೇಕೇ ಹೊರತು ಜಾತಿವಾದಿ ನಾಯಕರಲ್ಲ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹ ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ‌ ಆಯೋಜಿಸಿದ್ದ 11ನೇ ವರ್ಷದ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರವೀಣ್ ನೆಟ್ಟಾರು ಮತ್ತು ಹರ್ಷನ ಹತ್ಯೆ ಆರೋಪಿಗಳನ್ನು ಎನ್‌ಕೌಂಟರ್ ಮಾಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪರೋಕ್ಷವಾಗಿ ಜಾತಿವಾದಿ ಬಿಜೆಪಿ ನಾಯಕರ ಮತ್ತು ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದರು.

ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಬಾವುಟ, ಕರಪತ್ರ ಹಂಚಿ 2018 ರಲ್ಲಿ ಸರ್ಕಾರವನ್ನು ತಂದಿದ್ದೀರಿ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಯಿತು. ಮರ್ಡರ್ ಮಾಡಿದವರು ಎಲ್ಲಿ ಇದ್ದಾರೆ ಎಂದು ಪೊಲೀಸರಿಗೆ ಗೊತ್ತಿತ್ತು. ಪೊಲೀಸರ ಕೈಯಲ್ಲಿ ಬಂದೂಕು ಇತ್ತು. ಟ್ರಿಗರ್ ಎಳೆಯಲು ಬೆರಳು ಇತ್ತು. ಆದರೆ ಟ್ರಿಗರ್ ಎಳೆಯಬೇಡಿ ಎಂದು ಬಿಜೆಪಿ ಸರಕಾರಕ್ಕೆ ಆರ್ಡರ್ ಮಾಡಿದವರು ಯಾರು? ಪೊಲೀಸ್ ಇಲಾಖೆಯು ರಾಜಕಾರಣಿಗಳು ಎಂಬ ದುಷ್ಟ ವ್ಯವಸ್ಥೆಯಡಿ ಸಿಲುಕಿದೆ ಎಂದು ಆರೋಪಿಸಿದರು.