ಕಾರ್ಕಳ: ಪಡುತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಅಂಗವಾಗಿ ನಡೆಯುವ ವಿಶ್ವರೂಪ ದರ್ಶನ ಮತ್ತು ದೀಪಾಲಂಕಾರ ಕಾರ್ಯಕ್ರಮ ಭಕ್ತಿಭಾವ ಹಾಗೂ ಧಾರ್ಮಿಕ ವೈಭವದಿಂದ ಜರುಗಿತು.
ಶತಮಾನದ ಇತಿಹಾಸ ಹೊಂದಿರುವ ಈ ವಿಶೇಷ ಧಾರ್ಮಿಕ ಸಂಪ್ರದಾಯದ ಅಂಗವಾಗಿ ದೇವಸ್ಥಾನದ ಒಳಾಂಗಣ, ಹೊರಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹಸ್ರಾರು ಹಣತೆಗಳನ್ನು ಬೆಳಗಿಸಿ ದೀಪಾಲಂಕಾರ ಮಾಡಲಾಯಿತು. ಸುಮಾರು 25 ಸಾವಿರಕ್ಕೂ ಅಧಿಕ ಹಣತೆಗಳ ಬೆಳಕಿನಲ್ಲಿ ದೇವಸ್ಥಾನ ಕಂಗೊಳಿಸಿದ ದೃಶ್ಯ ಭಕ್ತರ ಕಣ್ಮನ ಸೆಳೆಯಿತು.
ಮುಂಜಾನೆ 3 ಗಂಟೆಯಿಂದಲೇ ಹಣತೆಗಳನ್ನು ಬೆಳಗಿಸುವ ಮೂಲಕ ದೀಪಾಲಂಕಾರ ಪೂಜೆಗೆ ಚಾಲನೆ ನೀಡಲಾಯಿತು. ಮುಂಜಾನೆಯ ನಸುಕಿನಲ್ಲೇ ಊರ ಹಾಗೂ ಪರವೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಶ್ರೀ ದೇವರ ವಿಶ್ವರೂಪ ದರ್ಶನ ಪಡೆದು ಪುನೀತರಾದರು. ದೀಪಗಳ ಸಾಲು, ಭಕ್ತರ ಗೋವಿಂದ ನಾಮಸ್ಮರಣೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಇಡೀ ಪರಿಸರವನ್ನು ಭಕ್ತಿಮಯವಾಗಿಸಿತು.
ದೇವಸ್ಥಾನದ ಸುತ್ತಮುತ್ತ ಮಕ್ಕಳು ವಿವಿಧ ಬಗೆಯ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು. ಬಣ್ಣಬಣ್ಣದ ರಂಗೋಲಿಗಳು ಹಾಗೂ ಸಾವಿರಾರು ಹಣತೆಗಳ ಜ್ಯೋತಿ ಒಂದೆಡೆ ಸೇರಿ ಹಬ್ಬದ ಸೊಬಗನ್ನು ಹೆಚ್ಚಿಸಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿ.ಎಸ್.ಬಿ. ಸಮಾಜದ ಬಾಂಧವರು ಹಾಗೂ ಶ್ರೀ ವೆಂಕಟರಮಣ ದೇವಸ್ಥಾನದ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಸೇವೆಯಲ್ಲಿ ತೊಡಗಿಸಿಕೊಂಡರು. ಭಕ್ತರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಸೇವಾ ಕಾರ್ಯಗಳನ್ನು ನಿರ್ವಹಿಸಿದರು.
ಶತಮಾನಗಳ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಕಾರ್ಕಳ ಪಡುತಿರುಪತಿಯ ವಿಶ್ವರೂಪ ದರ್ಶನವು ಧಾರ್ಮಿಕ ಶ್ರದ್ಧೆ, ಸಂಸ್ಕೃತಿ ಮತ್ತು ಸಾಮೂಹಿಕ ಭಕ್ತಿಯ ಅನನ್ಯ ಸಂಗಮವಾಗಿ ಗಮನ ಸೆಳೆಯಿತು.

