ಬೆಳ್ತಂಗಡಿ: ಲಾಯಿಲದಲ್ಲಿರುವ ಜ್ಯೋತಿ ಆಸ್ಪತ್ರೆ ಮತ್ತು ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೇಂದ್ರದ ವತಿಯಿಂದ ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ನೀಡಲಾದ ಈ ಬ್ಯಾರಿಕೇಡ್ ಗಳನ್ನು ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಜೀದು ರಾಧಾಕೃಷ್ಣನ್, ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿಯಾದ ಶ್ರೀಯುತ ಮನಮೋಹನ ದೇವ, ಜ್ಯೋತಿ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಸಿಸ್ಟರ್ ಮೆರಿಟ್ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿಸ್ಟರ್ ಬೆಟ್ಟಿ ವರ್ಗೀಸ್ (ಡಾ. ಸಿಸ್ಟರ್ ಅನುಜಾ) ರವರು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕರುಗಳಾದ ಶ್ರೀಯುತ ಕಿಶೋರ್ ಪಿ ಮತ್ತು ನಿಂಗಪ್ಪ ಡಿ ಜಕ್ಕಣ್ಣ ರವರಿಗೆ ಹಸ್ತಾಂತರಿಸಿದರು.

ಕೆಎಂಸಿ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಜೀದು ರಾಧಾಕೃಷ್ಣನ್ ಅವರು ಮೂಲ ಜೀವ ರಕ್ಷಣೆಯ (Basic Life Support) ಮಹತ್ವದ ಕುರಿತು ಮಾತನಾಡಿ, ತುರ್ತು ಪರಿಸ್ಥಿತಿಗಳಲ್ಲಿ ಜೀವ ಉಳಿಸುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಜೀವ ರಕ್ಷಣೆಯ (Basic life Support) ಮಹತ್ವದ ಕುರಿತು ನಾವು ಹಲವಾರು ವರುಷಗಳಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಂಗಳೂರು, ಉತ್ತರ ಕನ್ನಡ, ಕಾಸರಗೋಡು ಮತ್ತು ಕಣ್ಣೂರ್ ಜಿಲ್ಲೆಗಳಲ್ಲಿ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದ್ದಿದ್ದೇವೆ.
ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಚಿಸುವವರು ನಮ್ಮ ಬೆಳ್ತಂಗಡಿಯ ತುರ್ತು ಚಿಕಿತ್ಸಾ ಘಟಕದ ಮೊಬೈಲ್ ಸಂಖ್ಯೆ 8050416333 ಗೆ ಸಂಪರ್ಕಿಸಬಹುದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿಯಾದ ಶ್ರೀಯುತ ಮನಮೋಹನ ರವರು ಮಾತನಾಡಿ ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣದಲ್ಲಿ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಈ ಕೊಡುಗೆ ನೀಡಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೆಎಂಸಿ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕದ ವೈದ್ಯಕೀಯ ಸಿಬ್ಬಂದಿವರ್ಗ, ಜ್ಯೋತಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

