ಮಂಗಳೂರು : ಮತಪಟ್ಟಿಯನ್ನು ಬಿಎಲ್‌ಒಗಳು ಪರಿಕ್ಷಣೆ ಮಾಡುತ್ತಾರೆಯೇ ಹೊರತು ಮುಖ್ಯ ಚುನಾವಣಾ ಆಯುಕ್ತರಲ್ಲ. ಹೆಚ್ಚಾಗಿ ಬಿಎಲ್‌ಒಗಳು ಶಿಕ್ಷಕರು, ಕಂದಾಯ ಇಲಾಖೆ, ಸ್ಥಳೀಯಾಡಳಿತಗಳ ಅಧಿಕಾರಿಗಳೇ ಆಗಿದ್ದು ನಿಮ್ಮ ಆರೋಪ ಸತ್ಯ ಎಂದಾಗಿದ್ದರೆ ಎಲ್ಲಾ ಬಿಎಲ್‌ಒಗಳ ಮೇಲೆ ಕೇಸ್ ಹಾಕಿ ಎಂದು ಮಾಜಿ ಸಚಿವ ಸಿ.ಟಿ.ರವಿ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಶುದ್ಧೀಕರಣಕ್ಕಾಗಿ ಜವಾಹರ್ ಲಾಲ್ ನೆಹರೂ ಆರಂಭಿಸಿದ ಎಸ್‌ಐಆರ್, ಇಂದಿರಾ ಗಾಂಧಿ, ರಾಜೀವ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲೂ ಹೀಗೆ ಎಂಟು ಬಾರಿ ನಡೆದಿದ್ದು ಈಗ ನಡೆಯುತ್ತಿರುವುದು ಒಂಭತ್ತನೇ ಬಾರಿಯಾಗಿದೆ.

ಬಿಎಲ್‌ಒಗಳಿಗೆ ರಾಜಕೀಯ ಪಕ್ಷಗಳ ಬಿಎಲ್‌ಎಗಳು ಸಹಕಾರ ನೀಡಿದ್ದಾರೆ. ಶೇ.೯೯ರಷ್ಟು ಬಿಎಲ್‌ಒಗಳು ರಾಜ್ಯ ಸರ್ಕಾರದ ಅಧಿಕಾರಿಗಳು, ನೌಕರರೇ ಆಗಿದ್ದಾರೆ. ದೇಶದಲ್ಲಿ ೧೧ ಲಕ್ಷ ಬಿಎಲ್‌ಒಗಳಿದ್ದಾರೆ. ಹೋಗಿರುವಾಗ ರಾಜ್ಯ ಸರ್ಕಾರಕ್ಕೆ ತಮ್ಮದೇ ಅಧಿಕಾರಿಗಳ ಮೇಲೆ ಸಂಶಯವೇ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ ತಮ್ಮ ಆರೋಪ ಸತ್ಯ ಎಂದಾದರೆ ಬಿಎಲ್‌ಒಗಳ ಮೇಲೆ ಕ್ರಮ ಕೈಗೊಳ್ಳಿ, ಸುಳ್ಳು ಎಂದಾದರೆ ಕ್ಷಮೆ ಯಾಚಿಸಿ ಎಂದರು.

ರಾಜ್ಯದಲ್ಲಿ ೧೩ ಕೋಟಿ ಮತದಾರರನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಸಹಿತ ರಾಜಕೀಯ ಪಕ್ಷಗಳು ಆರೋಪಿಸುತ್ತಿದೆ. ೧೧ ಲಕ್ಷ ಬಿಎಲ್‌ಒಗಳು ದೇಶದಲ್ಲಿದ್ದಾರೆ. ಇವರಿಗೆ ವಿವಿಧ ರಾಜಕೀಯ ಪಕ್ಷದ ಬಿಎಲ್‌ಎಗಳು ಸಹಕಾರ ನೀಡಿದ್ದಾರೆ. ಮತಗಳ್ಳತನ ನಿಜವಾಗಿದ್ದರೆ ೧೧ ಲಕ್ಷ ಬಿಎಲ್ ಒ ಗಳನ್ನು ಅನುಮಾನಿಸಿದಂತೆ. ರಾಜ್ಯದಲ್ಲಿ ಎಸ್‌ಐಆರ್ ಗೆ ಮೊದಲು ೫.೫೪.೩೨೩೧೪ ಮತದಾರರಿದ್ದು ಪರಿಷ್ಕರಣೆ ಬಳಿಕ ೧,೭,೯೬,೩೩೯ ಮತದಾರರನ್ನು ಗೈರು, ಸ್ಥಳಾಂತರ, ನಿಧನ, ನಕಲಿ (ಎಎಸ್ ಡಿಡಿ) ಪಟ್ಟಿಗೆ ಸೇರಿಸಲಾಗಿದ್ದರೂ ಮತ್ತೆ ಫಾರಂ ಭರ್ತಿ ಮಾಡಿ, ಆಕ್ಷೇಪಣೆ ತೆಗೆದುಕೊಂಡು ಅಂತಿಮಗೊಳಿಸಲಾಗಿದೆ ಎಂದು ಸಿ.ಟಿ.ರವಿ ತಿಳಿಸಿದರು.

ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸುತ್ತೀರಾ?

ಇವಿಎಂ ಹ್ಯಾಕ್ ಮಾಡಿ ಬಿಜೆಪಿ ಗೆದ್ದಿದೆ ಎಂದು ಅಪಪ್ರಚಾರ ಮಾಡಿದ್ದ ಇವರಿಗೆ ಚುನಾವಣಾ ಅಯೋಗ ಮತ್ತು ನ್ಯಾಯಾಲಯ ಪುರಾವೆ ಕೇಳಿದಾಗ ಓಡಿ ಹೋದರು. ಇವಿಎಂ ಹ್ಯಾಕ್ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎನ್ನುವುದೇ ಹಾಸ್ಯಾಸ್ಪದ. ಇದೇ ಇವಿಎಂ ಉಪಯೋಗಿಸಿ ಕರ್ನಾಟಕ, ತೆಲಂಗಾನ, ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಿದ್ದರೆ, ಜಾರ್ಖಂಡ್ ಮತ್ತು ತಮಿಳ್ನಾಡಿನಲ್ಲಿ ಅಧಿಕಾರದ ಪಾಲುದಾರರಾಗಿದ್ದಾರೆ. ಇವಿಎಂ ಹ್ಯಾಕ್ ಸತ್ಯವೆಂದಾದರೆ ಇಲ್ಲಿ ಅಧಿಕಾರಕ್ಕೆ ಬಂದಿದ್ದೇಗೆ? ನೀವು ರಾಜಿನಾಮೆ ನೀಡಿ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಎದುರಿಸುತ್ತೀರಾ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಇವಿಎಂ ಮೂಲಕ ನಡೆದ ಮತದಾನದಲ್ಲಿ ೨೦೧೪ರಿಂದ ೨೦೨೪ರ ಅವಧಿಯಲ್ಲಿ ಕಾಂಗ್ರೆಸ್ ಮತ ಮತ್ತು ಸ್ಥಾನ ಗಳಿಕೆಯಲ್ಲಿ ಅಭಿವೃದ್ಧಿ ಆಗಿರುವುದರಿಂದ ಇವಿಎಂ ಹ್ಯಾಕ್ ಎನ್ನುವುದೇ ಸುಳ್ಳು. ಈಗ ಎಸ್‌ಐಆರ್ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಎಸ್‌ಐಆರ್ ನಿಂದ ಸಿಪಿಐಎಂ ನಕಲಿ ಮತದಾನ ಮಾಡುವುದು ತಪ್ಪಿದೆ ಎಂದು ಕೇರಳ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರೆ, ಡಿಎಂಕೆ ಮಾಡುತ್ತಿದ್ದ ನಕಲಿ ಮತದಾನವನ್ನು ತಪ್ಪಿಸಿದಂತಾಗಿದೆ ಎಂದು ತಮಿಳ್ನಾಡುವಿನಲ್ಲೊ ಟಿವಿಕೆ ಪ್ರಶಂಸೆ ಮಾಡಿದೆ. ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ಚುನಾಯಿತ ಸರ್ಕಾರವನ್ನು ಅರಾಜಕತೆಯ ಮೂಲಕ ಬದಲಾಯಿಸುವ ತಂತ್ರ ಭಾರತದಲ್ಲೂ ನಡೆಯುತ್ತಿದೆ.

ಆರಂಭದಲ್ಲಿ ಅಸಹಿಷ್ಣುತೆ ಪದ ಪ್ರಯೋಗಿಸಿದರು, ಬಳಿಕ ಸಿಎಎ ಮುಂದಿಟ್ಟು ಅಲ್ಪಸಂಖ್ಯಾತರಲ್ಲಿ ಭಯ ಸೃಷ್ಟಿಸಿ ಷಡ್ಯಂತ್ರ ನಡೆಸಲಾಯಿತು. ರೈತರ ಪರ ಜಾರಿಗೆ ತಂದ ಕಾಯ್ದೆಯನ್ನು ರೈತ ವಿರೋಧಿ ಎಂದು ಬಿಂಬಿಸಿ ಪಾರ್ಲಿಮೆಂಟ್ ಗೆ ಮುತ್ತಿಗೆ ಹಾಕಿ ಕೆಂಪು ಕೋಟೆಯಲ್ಲಿ ಖಾಲಿಸ್ತಾನ್ ಧ್ವಜ ಹಾರಿಸಿ ಅರಾಜಕತೆ ಸೃಷ್ಟಿಸಲಾಯಿತು ಎಂದು ಸಿ.ಟಿ.ರವಿ ಆರೋಪಿಸಿದರು.

ಕಾಂಗ್ರೆಸ್ ನವರ ‘ಮೊಹಬ್ಬತ್ ಕೇ ದುಖಾನ್ ನಲ್ಲಿ ತುಕ್ಡೇ ಗ್ಯಾಂಗ್, ಅರ್ಬನ್ ನಕ್ಸಲ್, ಜಿಹಾದಿಗಳು, ಭಾರತ ವಿರೋಧಿಗಳು ಪಾಲುದಾರರು. ಇವರು ಹೊಟ್ಟೆ ಕಿಚ್ಚು, ಸುಳ್ಳು ದ್ವೇಷ ವ್ಯಾಪಾರ ಮಾಡುತ್ತಿದ್ದಾರೆ. ಆರು ದಶಕಗಳ ರಾಜಕಾರಣ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಸಾಹೇಬರು, ೨೦೨೨ ರಲ್ಲಿ ಮೋದಿಯನ್ನು ರಾವಣನಿಗೆ ಹೋಲಿಸಿದರೆ, ಬಳಿಕ ವಿಷ ಸರ್ಪಕ್ಕೆ ಹೋಲಿಸಿದರು. ನಂತರ ಭಯೋತ್ಪಾದಕರ ಪಕ್ಷ ಎಂದು ಕರೆದರು. ಈಗ ಮೋದಿಯ ತಂದೆ ಬಗ್ಗೆ ಮಾತಾಡಿದ್ದು ಮೊಹಬ್ಬತ್ ಕೇ ದುಖಾನಾ, ನಫ್ರತ್ಕಾ ದುಖಾನಾ ಎಂದು ಸಿ.ಟಿ.ರವಿ ಹರಿಹಾಯ್ದರು.

ದೇಶದಲ್ಲಿ ಹಿಂದೆ ರಾಯಬರೇಲಿಯಲ್ಲಿ ಚುನಾವಣಾ ಅಕ್ರಮದ ಬಗ್ಗೆ ನ್ಯಾಯಾಲಯ ಹೇಳಿದ್ದಕ್ಕೆ ಕಾಂಗ್ರೆಸ್ ನ ಅದಿನಾಯಕಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ಅಧಿಕಾರ ಉಳಿಸಿಕೊಂಡಿದ್ದರು. ದೇಶದ ಪೌರತ್ವ ಸ್ವೀಕರಿಸುವ ಮೊದಲೇ ’ಸೋನಿಯಾ ಗಾಂಧಿ, ವೈಫ್ ಆಫ್ ರಾಜೀವ್ ಗಾಂಧಿ’ ಎಂದು ದಾಖಲಿಸುವ ಮ?ಲಕ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಕುಖ್ಯಾತಿ ಕಾಂಗ್ರೆಸ್ ಗೆ ಇದೆ. ದೇಶದ ೧೪೦ ಕೋಟಿ ಜನಸಂಖ್ಯೆಯಲ್ಲೀಗ ಬೊಬ್ಬೆ ಹೊಡೆಯುತ್ತಿರುವ ಜನರ ಸಂಖ್ಯೆ ಇನ್ನೂ ಲಕ್ಷ ದಾಟಿಲ್ಲ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.

ಸ್ಟಿಂಗ್ ಆಪರೇಶನ್ ವಿಚಾರ ಈಗ ಬೇಡ ಎಂದ ಸಿ.ಟಿ.ರವಿ, ಈ ಬಗ್ಗೆ ಹಾಗೂ ಇತರ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಎಚ್.ಡಿ.ಕುಮಾರ ಸ್ವಾಮಿ ನಮ್ಮ ಪಕ್ಧದ ಭಾಗ ಎಂದು ಸಮರ್ಥಿಸಿದರು. ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿದಾನಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಗುರ್ಮೆ ಸುರೇಶ್ ಶೆಟ್ಟಿ, ಭಗೀರಥಿ ಮುರುಳ್ಯ, ಭಾರತೀಶ್, ಜಯನ್ ಕೋಟ್ಯಾನ್, ಯತೀಶ್ ಆರ್ವರ್, ಸಂಜಯ್ ಪ್ರಭು, ಮನೋಹರ್ ಶೆಟ್ಟಿ ಹಾಗೂ ಪ್ರೇಮಾನಂದ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.