ಮಂಗಳೂರು : ಇಂದಿನ ವಿದ್ಯಮಾನಗಳಲ್ಲಿ ರಾಜಕಾರಣದಲ್ಲಿ ದೇವರ ಹೆಸರನ್ನು ತರುವುದು, ಆಣೆ ಪ್ರಮಾಣ ಮಾಡುವುದು ಅಷ್ಟೊಂದು ಸಮಂಜಸವಲ್ಲ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಟಿಕೆಟ್ ನೀಡಿ ಗೆಲ್ಲಿಸಿರುವ ಬಿಜೆಪಿ ಪಕ್ಷಕ್ಕೆ ನಿಷ್ಠೆಯನ್ನು ತೋರಬೇಕಾದ ಶಾಸಕರು ಅಡ್ಡಮತದಾನ ಮಾಡಿರುವುದು ಸರಿಯಲ್ಲ. ಅದರ ಬಗ್ಗೆ ತನಿಖೆ ನಡೆದು ಅವರಿಗೆ ಶಿಕ್ಷೆ ಆಗಬೇಕಾದುದು ಸಹಜ. ಈ ಬಗ್ಗೆ ನೋವಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಧರ್ಮಸ್ಥಳ್ಲದಲ್ಲಿ ಶಾಸಕಾಂಗ ಸಭೆ ಕರೆಯುತ್ತೇನೆ. ಅಲ್ಲಿ ಬಿಜೆಪಿಯ ಎಲ್ಲಾ 64ಶಾಸಕರು ಆಣೆ-ಪ್ರಮಾಣ ಮಾಡಬೇಕು ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಪಕ್ಷ ನಡೆಯುತ್ತಿರುವುದು ವಿಶ್ವಾಸ ಹಾಗೂ ನಂಬಿಕೆಯ ಮೇಲೆ. ಅವರ ನೋವು ಸಹಜವಾದದ್ದು, ಆದ್ದರಿಂದ ಈ ಬಗ್ಗೆ ಆಂತರಿಕವಾಗಿ ತನಿಖೆ ನಡೆಸುವಂತೆ ನಾನು ವಿನಂತಿ ಮಾಡುತ್ತೇನೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ನಡೆದ ಅಡ್ಡಮತದಾನ ವಿಚಾರ ಬಹಿರಂಗಗೊಳ್ಳಬೇಕಾದ ವಿಷಯವಲ್ಲ. ಖಂಡಿತವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಅಂಥವರನ್ನು ಹುಡುಕುವ ಶಕ್ತಿ ಬಿಜೆಪಿಗಿದೆ. ಪಕ್ಷಕ್ಕೆ ದ್ರೋಹ ಎಸಗಿದವರಿಗೆ ಕಠಿಣವಾದ ಶಿಕ್ಷೆಗೆ ಗುರಿಪಡಿಸುವಲ್ಲಿ ವಿಜಯೇಂದ್ರರೊಂದಿಗೆ ನಾನು ಇರುತ್ತೇನೆ ಎಂದು ಅವರು ಹೇಳಿದರು.
ಈಗಾಗಲೇ ಆಂತರಿಕ ತನಿಖೆಗಾಗಿ ಸಿ.ಟಿ.ರವಿ, ಮಹೇಶ್ ಟೆಂಗಿನಕಾಯಿ, ಮಹೇಶ್ ಶಿವರಾಂ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಆ ತನಿಖೆ ಪೂರ್ಣವಾಗಲಿ. ಆ ಬಳಿಕ ಇಂತಹ ಯೋಚನೆಗಳನ್ನು ಮಾಡಲಿ ಎಂದು ನಳಿನ್ ಸಲಹೆ ನೀಡಿದರು.
ಎರಡು ದಿನಗಳಲ್ಲಿ ಪಕ್ಷದ ಮುಖಂಡರಿಗೆ ವರದಿ ಸಲ್ಲಿಸುವ ಬಗ್ಗೆ ಸಿ.ಟಿ.ರವಿ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಟಿ.ರವಿ ಏನು ಹೇಳಿದ್ದಾರೋ ಅದಕ್ಕೆ ಪೂರ್ವ ತಯಾರಿ ಮಾಡುತ್ತಾರೆ ಎಂದು ನನಗೆ ಅನಿಸುತ್ತದೆ. ಬಿಜೆಪಿ ಪಕ್ಷ ಶಿಸ್ತಿಗೆ ಹೆಸರಾಗಿರುವ ಪಕ್ಷ. ಯಾರೇ ತಪ್ಪು ಮಾಡಿದರೂ ಅವರನ್ನು ಹುಡುಕುತ್ತೇವೆ. ಅವರಿಗೆ ಶಿಕ್ಷೆ ಕೊಟ್ಟೇ ಕೊಡಲಾಗುತ್ತದೆ. ಇದಕ್ಕೆ ಅನೇಕ ಉದಾಹರಣೆಗಳಿವೆ ಎಂದರು.
ಈ ಬಗ್ಗೆ ಸಭೆ ನಡೆದಲ್ಲಿ ತಾವು ಭಾಗವಹಿಸಿತ್ತೀರೋ ಎಂಬ ಪ್ರಶ್ನೆಗೆ ನಳಿನ್ ಪ್ರತಿಕ್ರಿಯೆ ನೀಡಿ, ಪಕ್ಷದ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸಬೇಕಾದುದು ನಮ್ಮ ಜವಾಬ್ದಾರಿ.ಯಾವಾಗ ಪಕ್ಷ ಅಪೇಕ್ಷೆ ಪಡುತ್ತದೋ ಆವಾಗೆಲ್ಲಾ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.

