ಮಂಗಳೂರು : ಜಿಲ್ಲೆಯ ಉಸ್ತುವಾರಿ ಸಚಿವರು ಮಾಡಬೇಕಾದ ಕೆಲಸವನ್ನು ಸ್ಪೀಕರ್ ಖಾದರ್ ಮಾಡ್ತಾ ಇದ್ದಾರೆ. ಸ್ಪೀಕರ್ ಆಗುವವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದು ಬಳಿಕ ಪೀಠದಲ್ಲಿ ಕೂತ್ಕಬೇಕು. ಆದರೆ ಸ್ಪೀಕರ್ ಖಾದರ್ ತಮ್ಮ ಹುದ್ದೆಯ ಘನತೆಯನ್ನು ಕಳೆದುಕೊಂಡಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸ್ಪೀಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ಅವರು, ಕಳೆದ 75 ವರ್ಷದಲ್ಲಿ ಸ್ಪೀಕರ್ಗಳು ಹೀಗೆ ಇರ್ಲಿಲ್ಲ. ಸ್ಪೀಕರ್ ಆದವರು ಕೆಂಪುಕಲ್ಲು, ಜನಗಣತಿ ಮಾತಾಡಿ ತಪ್ಪು ಮಾಡಿದ್ದಾರೆ. ಕೋಳಿವಾಡ, ಬೋಪಯ್ಯ ಕಾಗೇರಿಯವರು ಹುದ್ದೆಯ ಘನತೆ ಕಾದಾಡಿದ್ದರು. ಗುಂಡೂರಾವ್ ಹೆಸರಲ್ಲಿ ನಾನೇ ಜಿಲ್ಲೆಯ ಆಡಳಿತ ಮಾಡೋಕು ಅಂತ ಸ್ಪೀಕರ್ ತಲೆಯಲ್ಲಿ ಇದ್ದಂತಿದೆ. ಒಂದಾ ಗುಂಡೂರಾವ್ ಆಡಳಿತ ಮಾಡ್ಲಿ, ಇಲ್ಲಾಂದ್ರೆ ಸ್ಪೀಕರ್ ಮಾಡ್ಲಿ ಎಂದು ಸವಾಲು ಹಾಕಿದರು.

ಕೆಂಪು ಕಲ್ಲು ಸಮಸ್ಯೆ ಪರಿಹಾರವಾಗಿದೆ ಎಂದು ಮೂರು ತಿಂಗಳಿನಿಂದ ಹೇಳಿಕೊಂಡು ಬರ್ತಾ ಇದ್ದಾರೆ. ಆದರೆ ಇದುವರೆಗೂ ಪರಿಹಾರವಾಗಿರುವುದು ಕಾಡ್ತಾ ಇಲ್ಲ. ನಾವು ಪ್ರತಿಭಟನೆ ಮಾಡಿದರೆ ಬಿಜೆಪಿಗೆ ಏನೂ ಕೆಲ್ಸ ಇಲ್ಲ ಅಂತೀರಿ. ಜಿಲ್ಲಾ ಉಸ್ತುವಾರಿ ಸಚಿವರು ಸಭೆ, ಮಾಹಿತಿ ನೀಡುವ ಬದಲು ಸ್ಪೀಕರ್ ಮಾಹಿತಿ ಕೊಡುತ್ತಾರೆ. 25 ಜನರು ಲೀಸ್‌ಗೆ ಹಾಕಿದ್ದಾರೆ ಎಂದು ಹೇಳಿದ್ದೀರಿ. ಹಾಗಾದರೆ ಕೆಂಪು ಕಲ್ಲು ಸಮಸ್ಯೆ ಪರಿಹಾರ ಆಯ್ತಾ? ಎಂದು ಕಾಮತ್ ಪ್ರಶ್ನಿಸಿದರು.