ಮಂಗಳೂರು : ಫ್ಯಾಷನ್ ರನ್ ವೇ ಇಂಟರ್ ನ್ಯಾಷನಲ್ ವತಿಯಿಂದ ವಿಯೇಟ್ನಾಂನಲ್ಲಿ ಆ.13-17 ರ ವರಗೆ ಆಯೋಜಿಸಲ್ಪಟ್ಟ ಅಂತಾರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಂಗಳೂರಿನ‌ ಕುಲಶೇಖರದ 8 ವರ್ಷ ದ ಬಾಲಪ್ರತಿಭೆ ರುಶಭ್ ರಾವ್ ಅವರು ಪ್ರಥಮ‌ ಸ್ಥಾನ‌‌ ಪಡೆದಿದ್ದಾರೆ.

ರುಶಭ್ ರಾವ್ ಅವರು ಸ್ಪರ್ಧೆಯ ಪ್ರಿನ್ಸ್ ಕೆಟಗರಿಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಸೂಪರ್ ಟ್ಯಾಲೆಂಟ್‌ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಮೇ ತಿಂಗಳಲ್ಲಿ ಗೋವಾ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ಇಂಟರ್ ನ್ಯಾಷನಲ್ ಮೋಡೆಲ್ ಫ್ಯಾಷನ್ ಶೋ ಕಾಂಪಿಟೀಶನ್ ನಲ್ಲಿ ಪ್ರಿನ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ‌ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು ಎಂದು ರುಶಭ್ ಮಾರ್ಗದರ್ಶಕ, ನಟ – ನಿರ್ದೇಶಕ ರಾಹುಲ್ ಅಮೀನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಂದೆ ರಕ್ಷಿತ್ ರಾವ್ ಮಾತನಾಡಿ, ರುಶಭ್ ನಾಲ್ಕನೇ ವಯಸ್ಸಿಗೆ ನೃತ್ಯ ಕಲಿಯಲು ಆರಂಭಿಸಿ, ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ. ಬಳಿಕ ಅಭಿನಯದಲ್ಲಿ ಅವಕಾಶ ಲಭಿಸಿದ್ದು, ಮೂರು ತುಳು ಚಲನಚಿತ್ರ ಮತ್ತು ಒಂದು ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿದ್ದಾನೆ.‌ ಇದೆಲ್ಲ ಅವನ ವೇದಿಕೆ ಭಯವನ್ನು ದೂರ‌ ಮಾಡಿತು.

ಬಳಿಕ ಫ್ಯಾಷನ್ ಶೋ ಬಗ್ಗೆ ತಿಳಿಯಿತು. ಅದರಲ್ಲಿ ಪಾಲ್ಗೊಂಡರೆ ಹೊಸ ಅನುಭವ ದೊರೆಯಲಿದೆ ಎನ್ನುವ ಕಾರಣಕ್ಕೆ ಕರೆದುಕೊಂಡು ಹೋಗಿದ್ದೆವು. ಆದರೆ ನಮಗೇ ಆಶ್ಚರ್ಯ ವಾಗುವ ರೀತಿಯಲ್ಲಿ ಮೊದಲ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ. ಬಿಜೈ ಲೂರ್ಡ್ಸ್ ಶಾಲೆಯಲ್ಲಿ 3ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ ಎಂದರು.

ರುಶಭ್ ರಾವ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ‌ ಸ್ಥಾನ ಪಡೆದಿರುವುದು ತುಂಬಾ ಖುಷಿಯಾಗಿದೆ ಎಂದರು. ನ್ಯಾಷನಲ್ ಡೈರೆಕ್ಟರ್ ವರ್ಷಾ ದೇವಾಡಿಗ, ನೃತ್ಯ, ಟ್ಯಾಲೆಂಟ್ ರೌಂಡ್ ಗೆ ತರಬೇತಿ ನೀಡಿದ ನವೀನ್ ಶೆಟ್ಟಿ, ವಸ್ತ್ರ ವಿನ್ಯಾಸಕಿ ವರ್ಷಾ ವಿ.ಆಚಾರ್ಯ, ತಾಯಿ ಅಶ್ವಿನಿ ಉಪಸ್ಥಿತರಿದ್ದರು.