ಬಂಟ್ವಾಳ : ಮಾಜಿ ಸಚಿವ ಬಿ.ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ಬಲ್ಲೋಡಿಗುತ್ತು ಪದ್ಮಶೇಖರ ಜೈನ್ ಅವರ ಅಧ್ಯಕ್ಷತೆಯಲ್ಲಿ ಆ. 31ರ ವರೆಗೆ ನಡೆಯುವ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಬಂಟ್ವಾಳದ ಜಕ್ರಿಬೆಟ್ಟು ಬೈಪಾಸ್ ನಲ್ಲಿ ಮಂಗಳವಾರ ಚಾಲನೆ ದೊರಕಿದೆ.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋಲೂರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ನಮ್ಮ ಮೂಲಸಂಸ್ಕೃತಿಗಳು ವಿನಾಶದತ್ತ ಸಾಗುತ್ತಿದ್ದು, ಭಾರತದ ಮೂಲ ಸಂಸ್ಕೃತಿ ಉಳಿಯಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗಿಯಾಗಬೇಕು ಎಂದರು.

ರಮಾನಾಥ ರೈ ನೇತ್ರತ್ವದಲ್ಲಿ ನಡೆಯುವ ಜಕ್ರಿಬೆಟ್ಟು ಗಣೇಶೋತ್ಸವ ಶತಮಾನೋತ್ಸವ ಆಚರಣೆ ನಡೆಸಬೇಕು, ಯುವ ಸಮುದಾಯ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಅವರು ತಿಳಿಸಿದರು.

ಸಮಾಜದಲ್ಲಿ ಸಾಮರಸ್ಯದ ಅಭಾವವಿದ್ದು, ಧಾರ್ಮಿಕ ಕಾರ್ಯಕ್ರಮಗಳು ಸಹೋದರತೆಯ ಜೀವನದ ಚಿಂತನೆಯ ಸಂಕೇತವಾಗಬೇಕು. ರಮಾನಾಥ ರೈ ನೇತ್ರತ್ವದಲ್ಲಿ ನಡೆಯುವ ಗಣೇಶೋತ್ಸವ ಸಾಮರಸ್ಯದ ಸಂಕೇತದ ಗಣೇಶ ಉತ್ಸವವಾಗಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತೀಯರನ್ನು ಬಿಡಿಸಿ ಸ್ವಾಭಿಮಾನದ ಬದುಕನ್ನು ಕಂಡುಕೊಳ್ಳಲು ಬಾಲಗಂಗಾಧರ ತಿಲಕರು ಗಣೇಶೋತ್ಸವ ಪ್ರಾರಂಭ ಮಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ರಕ್ತಕ್ರಾಂತಿಯನ್ನು ಮಾಡಿದ್ದಾರೆ. ಆದರೆ ಗಾಂಧಿಯವರ ಪರಿಕಲ್ಪನೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಡುವುದಾಗಿತ್ತು. ಅದರಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಅವರು ತಿಳಿಸಿದರು.

ಐದು ದಿನಗಳ ಕಾಲ ನಡೆಯುವ ಜಕ್ರಿಬೆಟ್ಟು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಪ್ರತಿ ವರ್ಷವೂ ಒಂದು ವಿಭಿನ್ನವಾದ ಶೈಲಿಯ ಕಾರ್ಯಕ್ರಮವಾಗಿ ಮೂಡಿಬರುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭ ಅಧ್ಯಕ್ಷ ಬಿ.ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ಉಪಾಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ಎಲ್ ರೋಡ್ರಿಗಸ್, ಸಂಪತ್ ಕುಮಾರ್ ಶೆಟ್ಟಿ ಮುಂಡೋಲುಗುತ್ತು, ಮೋಹನ್ ಚಂಡ್ತಿಮಾರ್, ಪ್ರಧಾನ ಕಾರ್ಯದರ್ಶಿ ಎಂ.ರಾಜೀವ ಶೆಟ್ಟಿ ಎಡ್ತೂರು, ಕಾರ್ಯದರ್ಶಿಗಳಾದ ಎನ್.ಮಹಾಬಲ ಬಂಗೇರ, ಬೇಬಿ ಕುಂದರ್,

ಸುದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಪಿ.ಪ್ರವೀಣ್ ಕಿಣಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಕೃಷ್ಣ ಆರ್. ಅಂಚನ್, ಚಂದ್ರಶೇಖರ ಭಂಡಾರಿ, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಪ್ರಮುಖರಾದ ಅಶೋಕ್ ಭಂಡಾರಿಬೆಟ್ಟು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ವೆಂಕಪ್ಪ ಪೂಜಾರಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.