ಮಂಗಳೂರು: ಮಳೆಗಾಲದ ನಡುವೆ ಕಳೆದ ಕೆಲವು ದಿನಗಳಿಂದ ಮಳೆಯ ಜತೆಗೆ ಬಿಸಿಲಿನ ವಾತಾವ ರಣವೂ ಕಂಡು ಬರುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಡೆಂಗಿ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಪ್ರಾಣಾಪಾಯಕ್ಕೂ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮುಂಜಾಗೃತಾ ಕ್ರಮ ಗಳನ್ನು ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ಐದು ತಿಂಗಳ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ 43 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದರೆ, ಮೇ ತಿಂಗಳೊಂದರಲ್ಲೇ 10 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ (2024)ರಲ್ಲಿ ಒಟ್ಟು 534 ಡೆಂಗಿ ಪ್ರಕರಣಗಳು ಜಿಲ್ಲೆಯಲ್ಲಿ ದೃಢಪಟ್ಟಿದ್ದವು. ಮಂಗಳೂರು ಸೇರಿದಂತೆ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳಗಳಲ್ಲಿಯೂ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ ಎಂದವರು ಹೇಳಿದರು.
ಡೆಂಗ್ಯೂ ಜ್ವರಕ್ಕೆ ನಿಗದಿತ ಚಿಕಿತ್ಸೆ ಇರುವುದಿಲ್ಲ. ರೋಗ ಲಕ್ಷಣಗಳಿಗನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ಸಾಕಷ್ಟು ವಿಶ್ರಾಂತಿ ಹಾಗೂ ದ್ರವಾಹಾರ ಸೇವನೆ ಅತಿ ಅಗತ್ಯ ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷಿಸಿ ದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳೂ ಇರುತ್ತವೆ. ಜ್ವರ ಸಂದರ್ಭ ಸ್ವಯಂ ಚಿಕಿತ್ಸೆ ಅಥವಾ ಮನೆ ಮದ್ದು ಅಪಾಯಕಾರಿಯಾಗಬಹುದು.
ಜ್ವರ, ಮೈಕೈ ನೋವು ಸಂದರ್ಭವೈದ್ಯಕೀಯ ತಪಾಸಣೆ ಸಂದರ್ಭ ತಪಾಸಣೆ ನಡೆಸದೆ ನೋವು ನಿವಾರಕ ಮಾತ್ರೆ ಸೇವಿಸುವುದು ಅನಾಹುತಕ್ಕೆ ಕಾರಣವಾ ಗಬಹುದು. ಡೆಂಗಿ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯ ಪ್ಲೇಟ್ಲೆಟ್ ಪ್ರಮಾಣ ಕಡಿಮೆಯಾಗಿರುತ್ತದೆ. ಇಂತಹ ವ್ಯಕ್ತಿ ನೋವು ನಿವಾರಕ ಔಷಧಿ ಸೇವಿಸುವ ರೋಗಿಯ ಪ್ಲೇಟ್ಲೆಟ್ ಮತ್ತಷ್ಟು ಕುಸಿದು ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಡೆಂಗಿ ಜ್ವರದ ಲಕ್ಷಣ.
ಡೆಂಗಿ ವೈರಸ್ ಹೊಂದಿರುವ ಸೋಂಕಿತ ಈಡಿಸ್ ಹೆಣ್ಣು ಅತ್ಯಂತ ಸಣ್ಣ ಪ್ರಮಾಣದ (ಚಮಚ ಅಥವಾ ಹನಿ ಗಾತ್ರದ) ತೆರೆದ ನೀರಿನ ಸಂಗ್ರಹಣದಲ್ಲಿಯೂ ಡೆಂಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇವುಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿಯೇ ಆರೋಗ್ಯವಂತರಿಗೆ ಕಚ್ಚುತ್ತವೆ. ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು, ಡೆಂಗ್ಯೂ ಜ್ವರದಿಂದ ಬಳಲುತ್ತಿ ರುವವರು ಸೊಳ್ಳೆ ಪರದೆಯನ್ನು ಬಳಸಬೇಕು. ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆಧರಿಸಿ ಬೇವಿನ ಎಣ್ಣೆ ಸೊಳ್ಳೆ ಬತ್ತಿ, ಮುಲಾಮು, ಇತ್ಯಾದಿ ಸೊಳ್ಳೆ ನಿರೋಧಕಗಳನ್ನು ಉಪಯೋಗಿಸುವುದು ಸೂಕ್ತ ಎಂದು ಅವರು ಹೇಳಿದರು.

