ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೆಲ ಸಮಯದ ಹಿಂದೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಧಾರ್ಮಿಕ – ಸಾಂಸ್ಕೃತಿಕ ಸಂಘಟನೆಗಳು ಹಾಗೂ ಪಕ್ಷಗಳ ಮುಖಂಡರ ಸೌಹಾರ್ದತೆಯ ಮಾತುಗಳಿಗೆ ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣ ಸಾಕ್ಷಿಯಾಯಿತು.
ಗೃಹ ಸಚಿವ ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದವರೆಲ್ಲರೂ ಜಿಲ್ಲೆಯ ಸೌಹಾರ್ದತೆಯನ್ನು ಮರುಸ್ಥಾಪಿಸುವ ಕುರಿತಂತೆ ಸಲಹೆ, ಕ್ರಮಗಳ ಬಗ್ಗೆ ಗಮನ ಸೆಳೆದರು. “ಜಿಲ್ಲೆಯ ಎಲ್ಲ ಜನರು ಶಾಂತಿ ಬಯಸುತ್ತಾರೆ. ಹಾಗಾಗಿ ಎಲ್ಲರೂ ಕಾನೂನನ್ನು ಪಾಲಿಸಿ ಪೊಲೀಸರಿಗೆ ಅವರ ಕೆಲಸ ಮಾಡಲು ಬಿಟ್ಟರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ” ಎಂದು ವಂ. ಮ್ಯಾಕ್ಸಿಂ, ಕ್ರೈಸ್ತ ಧರ್ಮ ಪ್ರಾಂತ್ಯದ ಪ್ರಮುಖರು ಹೇಳಿದರು.

“ಸಮಾಜದ ಸುಭದ್ರತೆಯನ್ನು ಕಾಪಾಡುವುದು ಸರಕಾರದ ಕೆಲಸ. ದೈವಿಕವಾಗಿ ಅನುಗ್ರಹ ಹೊಂದಿರುವ ಜಿಲ್ಲೆಯಲ್ಲಿ ದ್ವೇಷ ಭಾಷಣ, ಅಪರಾಧ ಕೃತ್ಯಗಳು ನಡೆಯುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧ ಕೃತ್ಯಗಳನ್ನು ಎಸಗುವವರನ್ನು ಅಪರಾಧಿಗಳನ್ನಾಗಿ ಮಾತ್ರವೇ ಪರಿಗಣಿಸಿ, ಜಾತಿ ಧರ್ಮ ನೋಡದೆ ಕಾನೂನು ಕ್ರಮ ಜರಗಿಸಬೇಕು. ಅಪರಾಧಿಗಳಿಗೆ ಶಿಕ್ಷೆಯನ್ನು ಕಠಿಣಗೊಳಿಸಬೇಕು” ಎಂದು ಅಝೀಝ್ ದಾರಿಮಿ, ಧಾರ್ಮಿಕ ವಿದ್ವಾಂಸ ಹೇಳಿದರು.

