ಮಂಗಳೂರು : ಮದ್ರಸಗಳಲ್ಲಿ ಸೌಹಾರ್ದ ಬಿತ್ತುವ ಶಿಕ್ಷಣ ನೀಡ್ತಿದ್ದೀವಾ..? ಆಡಳಿತ ವೈಫಲ್ಯಕ್ಕೆ ಜನರ ತಲೆಗೆ ಕಟ್ಟಬೇಡಿ, ಕೋಮು ದ್ವೇಷ ನೆಪದಲ್ಲಿ ಜಿಲ್ಲೆಗೆ ಕೆಟ್ಟ ಹೆಸರು ಬೇಡ, ಧರ್ಮದ ವಿಚಾರದಲ್ಲಿ ಕೈಹಾಕದಿರಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.
ಮಸೀದಿ, ಮದ್ರಸ, ದೇವಸ್ಥಾನ, ಚರ್ಚುಗಳಲ್ಲಿ ಕೋಮು ಸೌಹಾರ್ದ, ರಾಷ್ಟ್ರ ಭಕ್ತಿಯನ್ನು ಬಿತ್ತುವ ಶಿಕ್ಷಣ ಕೊಟ್ಟರೆ ಸಾಮರಸ್ಯ ನೆಲೆಸುತ್ತದೆ. ಮದ್ರಸಾಗಳಲ್ಲಿ ದೇಶಭಕ್ತಿಯ, ಶಾಂತಿ ಸೌಹಾರ್ದ ಬಿತ್ತುವ ಶಿಕ್ಷಣ ನೀಡುತ್ತಿದ್ದೇವಾ, ನಾವು ಧಾರ್ಮಿಕ ಕೇಂದ್ರಗಳಲ್ಲಿ ಯಾವ ರೀತಿಯ ಶಿಕ್ಷಣ ನೀಡುತ್ತಿದ್ದೇವೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಈ ಜಿಲ್ಲೆಯಲ್ಲಿ ಯಾವಾಗ ಕೋಮು ಗಲಭೆಗಳು ಆಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ಲವ್ ಜಿಹಾದ್ ನೆಪದಲ್ಲಿ ಹಿಂದು ಹುಡುಗಿಯರ ವಿಚಾರ ಬಂದಾಗ, ಗೋಹತ್ಯೆ ಆದಾಗ ಕೋಮು ದ್ವೇಷದ ವಾತಾವರಣ ಆಗಿದೆ. ಇದಕ್ಕೆ ಡ್ರಗ್ಸ್, ಗಾಂಜಾ, ಇನ್ನಿತರ ಅಕ್ರಮ ದಂಧೆಗಳು ಸಾಥ್ ಕೊಟ್ಟಿವೆ. ಇವನ್ನು ಕಾನೂನು, ಪೊಲೀಸರ ಸೂಕ್ತವಾಗಿ ನಿಗ್ರಹಿಸಬೇಕಾಗಿದೆ ಎಂದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಪಕ್ಷದಲ್ಲಿ ಗೆದ್ದ ಬಳಿಕ ಸೈದ್ಧಾಂತಿಕ ಬದ್ಧತೆ ಇರಿಸಿಕೊಳ್ಳಬೇಕಾಗುತ್ತದೆ. ಪೊಲೀಸರು ಏಕಾಏಕಿ ಮಧ್ಯರಾತ್ರಿ ಹಿಂದು ಸಂಘಟನೆಗಳ ಪ್ರಮುಖರ, ಯಾವುದೇ ಅಪರಾಧ ಹಿನ್ನೆಲೆಯಿಲ್ಲದ ಆರೆಸ್ಸೆಸ್ ಹಿರಿಯರ ಮನೆಗಳಿಗೆ ಹೋಗಿ ಫೋಟೊ ತೆಗೆದರೆ ನಾವು ಸಮಾಜದಲ್ಲಿ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ.
ನಾವು ಇದನ್ನು ಸಹಿಸಿಕೊಂಡು ಇರಬೇಕಾಗುತ್ತಾ ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೆದುರಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ. ಇಲ್ಲಿ ಕೇವಲ ಭಾಷಣದ ಕಾರಣಕ್ಕೆ ಕೋಮು ಸಂಘರ್ಷ ಆಗಿಲ್ಲ ಎನ್ನುವುದನ್ನು ಗಮನಿಸಬೇಕು. ಇಲ್ಲಿನ ಕೊಲೆಗಳು ಸ್ವಯಂ ಪ್ರೇರಣೆಯಿಂದ ಆಗಿರುವುದೋ, ಯಾವುದೋ ಭಾಷಣದಿಂದ ಆಗಿರುವುದೋ ಅನ್ನುವುದನ್ನು ತನಿಖೆಯ ಮೂಲಕ ಕಂಡುಕೊಳ್ಳಿ ಎಂದು ಹರೀಶ್ ಪೂಂಜಾ ಗೃಹ ಸಚಿವರಿಗೆ ಸಲಹೆ ಇತ್ತರು.
ಕರಾವಳಿಯಲ್ಲಿ ಸಂಪ್ರದಾಯದಂತೆ ನಡೆದುಬಂದ ಗಣೇಶೋತ್ಸವವನ್ನು ರಾತ್ರಿ 11 ಗಂಟೆಗೆ ಮಿತಿ ಹಾಕಿದರೆ ಅವನ್ನು ಪ್ರಶ್ನಿಸುವ ಸ್ಥಿತಿ ಬರಬಹುದು. ಹಿಂದಿನಿಂದಲೂ ಶಾಲೆಗಳಲ್ಲಿ ಗಣೇಶೋತ್ಸವ ನಡೆದು ಬರ್ತಾ ಇತ್ತು ಹಿಂದಿನ ಬಾರಿ ಅದನ್ನು ನಿರ್ಬಂಧಿಸಿ, ಅದರಿಂದ ಸಮಾಜದ ಮೇಲೆ ಪ್ರಚೋದನೆಗೆ ಅವಕಾಶ ಕೊಟ್ಟಂತಾಗಿತ್ತು ಹಾಗಂತ, ಇಲ್ಲಿ ಎಲ್ಲೂ ತೊಂದರೆ ಎದುರಾಗಿಲ್ಲ. 8-9 ಮೆಡಿಕಲ್ ಕಾಲೇಜುಗಳಿವೆ, ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೊಲೆಯ ಕಾರಣಕ್ಕೆ ಕೋಮು ಹಣೆಪಟ್ಟಿ ಕಟ್ಟುವುದು ಬೇಡ ಎಂದು ಹರೀಶ್ ಪೂಂಜ ಹೇಳಿದರು.

