ಬಂಟ್ವಾಳ: ಇಂದು ಸಂಜೆಯ ವೇಳೆಗೆ ಬಂಟ್ವಾಳ ತಾಲೂಕಿನಲ್ಲಿ ಭಾರೀ ಗಾಳಿ ಮಳೆ ಬೀಸಿದ್ದು, ಹಲವೆಡೆಗಳಲ್ಲಿ ಹಾನಿಯಾಗಿದೆ. ಕೆಲವೆಡೆಗಳಲ್ಲಿ ಬೃಹತ್ ಮರಗಳು ಧರೆಗುರುಳಿದರೆ, ಇನ್ನು ಅನೇಕ ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಕಲಾದ ಬ್ಯಾನರ್ಗಳು ನೆಲಕಚ್ಚಿವೆ, ಹಲವು ಮನೆಗಳು ಹಂಚು, ತಗಡು ಶೀಟುಗಳು ಹಾರಿ ಬಿದ್ದಿರುವ ಬಗ್ಗೆ ವರದಿಯಾಗಿದೆ.

ಮಾಣಿ-ಪುತ್ತೂರು ರಾಷ್ಟ್ರೀಯ ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ತೆಂಗಿನ ಮರವೊಂದು ವಿದ್ಯುತ್ ತಂತಿ ಕಂಬದ ಮೇಲೆ ಬಿದ್ದು, ರಸ್ತೆಗೆ ಬಿದ್ದ ಕಾರಣ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಅವಘಡದ ವೇಳೆ ಬೈಕಿನಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರ ಸ್ವಲ್ಪದರಲ್ಲೇ ಪಾರಾಗಿದ್ದಾನೆ.
ಈ ವೇಳೆ ಮೆಸ್ಕಾಂ ಗೆ ಮಾಹಿತಿ ನೀಡಿದ ಸ್ಥಳೀಯರು, ತೆಂಗಿನ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವು ಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಯಿಂದ ಮೆಸ್ಕಾಂ ಗೆ ಭಾರೀ ನಷ್ಟ ಉಂಟಾಗಿದೆ.

ಉಳಿದಂತೆ ಬಾಳ್ತಿಲ ಗ್ರಾಮದ ಬೇಬಿ ಎಂಬವರ ಮನೆಯ ಶೀಟು ಛಾವಣಿಗೆ ಹಾನಿಯಾಗಿದೆ, ನಾವೂರ ಮೈಂದಾಲ ನಿವಾಸಿ ಮೇರಿ ಡಿಸೋಜ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ನಾವೂರ ಮೈಂದಾಲ ನಿವಾಸಿ ಇಲ್ಯಾಸ್ ಮನೆ ಮೇಲ್ಚಾವಣಿಗೆ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಮುಗೇರಪಡ್ಪು ಯಶೋಧ ಎಂಬವರ ವಾಸ್ತವ್ಯದ ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿಯಾಗಿದೆ.

ನಾವೂರ ಗ್ರಾಮದ ಸುಲ್ತಾನ್ ಕಟ್ಟೆ ನಿವಾಸಿ ಮಹಮ್ಮದ್ ಇಸಾಕ್ ಅವರ ಮನೆಗೆ ಹಾನಿ, ನಾವೂರು ಗ್ರಾಮದ ಗಿರಿಜಾ ಎಂಬವರ ನೆಯ ಮೇಲ್ಛಾವಣಿಗೆ ಹಾನಿಯಾದ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಜೆ ೪.೩೦ ರ ವೇಳೆಗೆ ಬಿ.ಸಿ.ರೋಡಿನಲ್ಲಿಯೂ ಭಾರೀ ಗಾಳಿ ಬೀಸಿದ್ದು, ಏಕಾಏಕಿ ಮೋಡ ಆವರಿಸಿದ್ದರಿಂದ ಜನತೆ ಆತಂಕ ಎದುರಿಸಿದರು.

