ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಕಳೆದ ರಾತ್ರಿಯಿಂದ ನಿರಂತೆ ಮಳೆಯಾಗುತ್ತಿರುವ ಪರಿಣಾಮ ನೇತ್ರಾವತಿ, ಮೃತ್ಯುಂಜಯ ನದಿಗಳು ಉಕ್ಕಿ ಹರಿಯುತ್ತಿದ್ದು, ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಮರ ಉರುಳಿದ್ದರಿಂದ ಸಂಚಾರಕ್ಕೆ ತಡೆಯಾಗಿದೆ.

ಘಾಟ್ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಮರ ಉರುಳಿದ್ದು, ರಸ್ತೆ ತಡೆಯಾಗಿದೆ. ಮಳೆಗಾಲದ ಮುನ್ನ ಅಪಾಯಕಾರಿ ಮರ ತೆರವು ಮಾಡದೆ ಇಲಾಖೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಪರದಾಡುವಂತಾಗಿದೆ. ಈ ವಿಚಾರವಾಗಿ ಸಾರ್ವಜನಿಕ ವಲಯದಿಂದ ಇಲಾಖೆ ಬೇಜವಾಬ್ದಾರಿತನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದ್ದು, ನದಿ ಸಮೀಪದ ತೋಟಗಳಿಗೆ ನೀರು ನುಗ್ಗಿದೆ. ತೀರ ಗ್ರಾಮಾಂತರ ಸರಕಾರಿ ಶಾಲೆಗಳಲ್ಲಿ ಸ್ವಯಂಪ್ರೇರಿತವಾಗಿ ರಜೆ ನೀಡಲಾಗಿದೆ. ಅಪಾಯದ ಮಟ್ಟ ಮೀರಿ ನದಿ ನೀರು ಹೆಚ್ಚಳವಾಗುತ್ತಿರುವುದರಿಂದ ನೆರೆ ಸಂಭವ ಸಾಧ್ಯತೆ ಎದುರಾಗಿದೆ.