ಮಂಗಳೂರು : ದ ಸಾಫ್ರಾನ್ ಫ್ರಂಟ್ ನೇತೃತ್ವದಲ್ಲಿ ‘ಜಾಗೃತ ಸಂತ- ಉದ್ಧೃತ ಭಾರತ‘ ಎಂಬ ಘೋಷ ವಾಕ್ಯದೊಂದಿಗೆ ವೀರ ಸಂತರ ‘ಸ್ಮೃತಿ ದಿವಸ್‘ ಆಚರಣೆ ಹಾಗೂ ಗೋಪಾಷ್ಟಮಿ ಪ್ರಯುಕ್ತ ಸಾರ್ವಜನಿಕ ಗೋಪೂಜೆ ನ.17ರಂದು ಕದ್ರಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಘಟನೆಯ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಮಾತನಾಡಿ, ಕನ್ಯಾಡಿ ಶ್ರೀ ರಾಮಕ್ಷೇತ್ರ, ಶ್ರೀ ಪಂಚದಶಾನಂ ಜುನಾ ಅಖಾಡಾದ ಮಹಾಮಂಡಲೇಶ್ವರ 1008 ಶ್ರಿ ಕನ್ಯಾಡಿ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕ ಗೋ ಪೂಜೆ ಆರಂಭ. ಸಂಜೆ 4 ಗಂಟೆಗೆ ಕದ್ರಿ ಕ್ಷೇತ್ರದಲ್ಲಿ ಪೂಜೆ ನೆರವೇರಿಸಿ, ಸಂತರ ಮೆರವಣಿಗೆ ಕದ್ರಿ ಮೈದಾನದ ವರೆಗೆ ಸಾಗಲಿದೆ.
ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಶಾದ ಶ್ರೀ ಗೋವರ್ಧನ ಪೀಠದ ಶ್ರೀ ಜಗದ್ಗುರು ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ, ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್, ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರು, ಉಡುಪಿ ಪೇಜಾವರ ವಿಶ್ವಪ್ರಸನ್ನ ತೀರ್ಥರು, ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಸುಮಾರು 32 ಸ್ವಾಮೀಜಿಗಳು, ಜನಪ್ರತಿನಿಧಿಗಳು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ರಾಷ್ಟ್ರೀಯ ಗೋಸೇವಾ ಸಂಸ್ಥಾನ ಅಧ್ಯಕ್ಷ ಭಕ್ತಿ ಭೂಷಣ್ ದಾಸ್ ಗುರೂಜಿ, ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಡಾ| ಎಲ್.ಕೆ. ಸುವರ್ಣ, ಜಾರ್ಜ್ ಫೆರ್ನಾಂಡಿಸ್ ಸೋಶಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮುನಿರತ್ನ, ಸಾಫ್ರಾನ್ ಫ್ರಂಟ್ ಯುವ ಘಟಕದ ಅಧ್ಯಕ್ಷ ವರ್ಣಿತ್ ಶೆಟ್ಟಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ತುಷಾರ್ ಕದ್ರಿ ಉಪಸ್ಥಿತರಿದ್ದರು.

