ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 2017 ರಲ್ಲಿ ಆರಂಭವಾದ ಜಿಪಿಎಲ್ ಉತ್ಸವ್ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಅಮ್ಗಿಲೆ ದಿ ಒರಿಜಿನಲ್ ಆಭರಣ್ ಜಿಪಿಎಲ್ ಉತ್ಸವ್ 2026 ಈ ಬಾರಿ ದಶಮಾನೋತ್ಸವದ ಸಂಭ್ರಮ. ಈ ಹತ್ತನೇ ವರ್ಷದ ಸಂಭ್ರಮ ಮೂಲ್ಕಿ-ಹೆಜಮಾಡಿಯಲ್ಲಿರುವ ಶ್ಯಾನುಭೋಗ್ ಕುದ್ರುವಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಇದೇ ಎಪ್ರಿಲ್ 10, 11, 12 ರಂದು ಬೆಳಿಗ್ಗೆ 10 ಗಂಟೆಯಿಂದ ತಡರಾತ್ರಿಯ ತನಕ ನಿರಂತರವಾಗಿ ಕ್ರಿಕೆಟ್, ಸಾಂಸ್ಕೃತಿಕ ಉತ್ಸವ ನಡೆಯಲಿದೆ.
ಕ್ರಿಕೆಟ್
ಕರ್ನಾಟಕ, ಕೇರಳ, ಮಹಾರಾಷ್ಟ್ರ, ತೆಲಂಗಾಣ ಸಹಿತ ವಿವಿಧ ರಾಜ್ಯಗಳಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕ್ರೀಡಾಪಟುಗಳು ಹದಿನಾರು ತಂಡಗಳೊಂದಿಗೆ ಪ್ರತಿಷ್ಠಿತ ಜಿಪಿಎಲ್ ಉತ್ಸವದ ಹತ್ತನೇ ವರ್ಷದ ಜಿಪಿಎಲ್ ಕಪ್ ಗಾಗಿ ಹೊಚ್ಚ ಹೊಸ ಹುಲ್ಲುಹಾಸಿನ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ.
ಎಪ್ರಿಲ್ 10, 11, ಮತ್ತು 12 ರಂದು ಶಾನುಭೋಗ್ ಕುದ್ರುವಿನಲ್ಲಿ ಹೊನಲು ಬೆಳಕಿನಲ್ಲಿ ನಡೆಯುವ ಕ್ರಿಕೆಟ್ ಟೂರ್ನಮೆಂಟನ್ನು ಮೈದಾನದ ಸುತ್ತ ಹಾಕಿರುವ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ನೋಡುವುದೇ ಚೆಂದ. ಪ್ರತಿ ಪಂದ್ಯದ ಬಳಿಕ ಪಂದ್ಯಶ್ರೇಷ್ಟ ಕ್ರೀಡಾಪಟುವಿಗೆ ಆಕರ್ಷಕ ಉಡುಗೊರೆಯನ್ನು ನೀಡಿ ಗೌರವಿಸಲಾಗುವುದು. ಪ್ರತಿ ತಂಡದ ಕ್ರೀಡಾಪಟುಗಳು ವಿಶೇಷವಾಗಿ ತಯಾರಿಸಿದ ಜೆರ್ಸಿಯಲ್ಲಿ ಮಿಂಚಲಿದ್ದಾರೆ.
ಸರಣಿ ಶ್ರೇಷ್ಟ ಕ್ರೀಡಾಪಟುವಿಗೆ ಹೊಸ ಬೈಕ್ ಸ್ಮರಣಿಕೆಯಾಗಿ ನೀಡಲಾಗುವುದು. ಉತ್ತಮ ದಾಂಡಿಗ, ಉತ್ತಮ ಬೌಲರ್, ಉತ್ತಮ ಕ್ಷೇತ್ರ ರಕ್ಷಕ, ಹೀಗೆ ವಿವಿಧ ಕ್ಯಾಟಗರಿಯಲ್ಲಿ ಬಹುಮಾನ ವಿತರಿಸಲಾಗುವುದು. ಫೈನಲ್ ಪಂದ್ಯಾಟದಲ್ಲಿ ಗೆಲ್ಲುವ ತಂಡಕ್ಕೆ ಮತ್ತು ರನ್ನರ್ ಅಪ್ ತಂಡಕ್ಕೆ ನಗದು, ಆಕರ್ಷಕ ಟ್ರೋಫಿ, ಪದಕಗಳನ್ನು ನೀಡಿ ಗೌರವಿಸಲಾಗುವುದು.
ಫುಡ್ ಕೋರ್ಟ್
ಜಿಪಿಎಲ್ ಉತ್ಸವದಲ್ಲಿ ಫುಡ್ ಕೋರ್ಟ್ ವಿಶೇಷ ಆಕರ್ಷಣೆಯಾಗಿರುತ್ತದೆ. ದಕ್ಷಿಣ ಭಾರತ, ಉತ್ತರ ಭಾರತದ ವಿವಿಧ ಶುದ್ಧ ಸಸ್ಯಹಾರಿ ತಿಂಡಿ, ತಿನಿಸುಗಳೊಂದಿಗೆ ಮೇಳೈಸುವ ತಿಂಡಿ ತಿನಿಸುಗಳನ್ನು ಹತ್ತಾರು ಕೌಂಟರ್ ಗಳಲ್ಲಿ ಕ್ರೀಡಾಪ್ರೇಮಿಗಳಿಗಾಗಿಯೇ ತೆರೆದಿಡಲಾಗುತ್ತದೆ. ಸ್ಥಳೀಯ ಬಾಯಿಯಲ್ಲಿ ನೀರೂರಿಸುವ ಚರುಂಬುರಿಯಿಂದ ಹಿಡಿದು ಕಾಶ್ಮೀರದ ಶ್ರೀನಗರದಿಂದ ತರಿಸಲಾದ ವಿಶೇಷ ಪಾನೀಯಗಳನ್ನು ಒಳಗೊಂಡು ಸ್ವಾದಿಷ್ಟ್ಯ ಆಹಾರಗಳನ್ನು ಅತ್ಮೀಯರೊಂದಿಗೆ ಕುಳಿತು ಸವಿಯುವುದಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ವಿಶೇಷ ಅತಿಥಿಗಳಿಗಾಗಿ ಹಾಗೂ ಜಿಪಿಎಲ್ ಉತ್ಸವಕ್ಕೆ ಸಹಕಾರ ನೀಡುತ್ತಿರುವ ಗಣ್ಯರಿಗಾಗಿ ಪ್ರತ್ಯೇಕ ಸುಖಾಸೀನ ವ್ಯವಸ್ಥೆಯನ್ನು ಫುಡ್ ಕೋರ್ಟ್ ನಲ್ಲಿ ರಚಿಸಲಾಗಿದ್ದು, ಅಲ್ಲಿ ಅತಿಥ್ಯಕ್ಕಾಗಿ ನುರಿತ ಪರಿಣಿತರು ಇರಲಿದ್ದಾರೆ.
ಬೋಟಿಂಗ್
ಜಿಪಿಎಲ್ ಉತ್ಸವದಲ್ಲಿ ಬೋಟಿಂಗ್ ಗಾಗಿಯೇ ದೂರ ದೂರದಿಂದ ಆಗಮಿಸುವ ನಮ್ಮ ಸಮಾಜದ ಜನರಿಗಾಗಿ ಈ ಬಾರಿ ಶಾಂಭವಿ ನದಿಯಲ್ಲಿ ಬೋಟಿಂಗ್ ಗಾಗಿಯೇ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಸ್ಪೀಡ್ ಬೋಟ್, ಫ್ಯಾಮಿಲಿ ಬೋಟ್, ಜೆಟ್ ಕಿಂಗ್, ಕಾಯಾಕಿ ಹೀಗೆ ವಿವಿಧ ಬೋಟುಗಳಲ್ಲಿ ಸುರಕ್ಷಿತವಾಗಿ ವಿಹರಿಸುವ ಮಜಾವೇ ಬೇರೆ. ಬೋಟಿನಲ್ಲಿ ಕುಳಿತು ಬಪ್ಪನಾಡಿನ ಸೌಂದರ್ಯವನ್ನು ಆಹ್ಲಾದಿಸಲು ಎಲ್ಲರ ಮನಸ್ಸು, ದೇಹ ಕಾತರಿಸುತ್ತಿದೆ.
ಕಿಡ್ಸ್ ಝೋನ್
ಜಿಪಿಎಲ್ ಉತ್ಸವದಲ್ಲಿ ಚಿಣ್ಣರಿಗಾಗಿಯೇ ಪ್ರತಿ ವರ್ಷ ಕಿಡ್ಸ್ ಝೋನ್ ನಿರ್ಮಿಸಲಾಗುತ್ತದೆ. ಹೆತ್ತವರೊಂದಿಗೆ ಬರುವ ಮಕ್ಕಳು ಮೊದಲು ಓಡುವುದೇ ಕಿಡ್ಸ್ ಝೋನ್ ಕಡೆಗೆ. ಅಲ್ಲಿ ಅವರಿಗಾಗಿಯೇ ವಿಶೇಷ ರೀತಿಯ ಆಟಗಳನ್ನು ಏರ್ಪಡಿಸಲಾಗುತ್ತದೆ. ಈ ವರ್ಷವು ಹತ್ತನೇ ವರ್ಷದ ವಿಶೇಷತೆಗಾಗಿ ವಿಭಿನ್ನ ಆಟಗಳನ್ನು ತರಿಸಲಾಗಿದೆ.
ಶಾಂಭವಿ ಆರತಿ
ಶ್ಯಾನುಭೋಗ್ ಕುದ್ರು ಇರುವುದೇ ಶಾಂಭವಿ ನದಿ ತಟದಲ್ಲಿ. ಹಾಗಿರುವಾಗ ಶಾಂಭವಿ ನದಿಗೊಂದು ಆರತಿ ಮಾಡಿ ಆಕೆಯ ಕೃಪೆಗೆ ಪಾತ್ರರಾಗುವ ಅವಕಾಶ ಈ ಬಾರಿ ಸಿಕ್ಕಿದೆ. ಹರಿದ್ವಾರ, ಕಾಶೀಯಲ್ಲಿ ಗಂಗಾನದಿಯ ತಟದಲ್ಲಿ ಗಂಗಾರತಿ ಮಾಡಿದಂತೆ ಇಲ್ಲಿ ಶಾಂಭವಿ ಆರತಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಜಿಪಿಎಲ್ ಉತ್ಸವದ ಮೂರು ದಿನ ಶ್ಯಾನುಭೋಗ್ ಕುದ್ರುವಿನಲ್ಲಿ ನಿರ್ಮಿಸಲಾಗಿರುವ ವಿಶೇಷ ಬೃಹತ್ ವೇದಿಕೆಯಲ್ಲಿ ಜಿಎಸ್ ಬಿ ಸಮಾಜದ ಪ್ರತಿಭಾವಂತ ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ನೀಡುವುದಕ್ಕಾಗಿ ಸಾಂಸ್ಕೃತಿಕ ಕಲಾ ವೇದಿಕೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಭರತನಾಟ್ಯ ಸಹಿತ ನೃತ್ಯ ಪ್ರಕಾರಗಳು, ಸಂಗೀತದೊಂದಿಗೆ ಗಾಯನ, ವಾದ್ಯಗೋಷ್ಟಿ, ಹಾಡುಗಾರಿಕೆ ಹೀಗೆ ವಿವಿಧ ಕಲಾ ಶೈಲಿಯಲ್ಲಿ ಪ್ರದರ್ಶನ ನೀಡುವ ಅವಕಾಶ ನೀಡಲಾಗಿದೆ.
ಪಂಚಾಯತಿ ಕಟ್ಟೆ
ಈ ಬಾರಿಯ ಜಿಪಿಎಲ್ ಉತ್ಸವದ ಹತ್ತನೇ ವರ್ಷದ ಪ್ರಯುಕ್ತ ಪಂಚಾಯತಿ ಕಟ್ಟೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಕವಿಗೋಷ್ಠಿ, ಕಥಾವಾಚನ, ಹರಟೆ ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ವಾತಾವರಣ ಸೃಷ್ಟಿಸಲಾಗಿದೆ.
ಪೆಟ್ ಶೋ
ನಮ್ಮ ಮನೆಯಲ್ಲಿ ನಾವು ಸಾಕುವ ನಾಯಿ, ಬೆಕ್ಕು, ಗಿಳಿ ಹೀಗೆ ಸಾಕು ಪ್ರಾಣಿಗಳನ್ನು ನೀವು ಈ ಬಾರಿ ಜಿಪಿಎಲ್ ಉತ್ಸವಕ್ಕೆ ಕರೆದುಕೊಂಡು ಬರಬಹುದು. ಅಲ್ಲಿ ಸಾಕುಪ್ರಾಣಿಗಳಿಗೆ ರ್ಯಾಂಪ್ ವಾಕ್ ಸಹಿತ ಪೆಟ್ ಶೋ ನಡೆಯಲಿದೆ.
ಜಿಪಿಎಲ್ ಕ್ರೀಡಾ ಕಾರ್ನಿವಲ್
ಒಂದು ಕಡೆ ಕ್ರಿಕೆಟ್ ಆಟ ನಡೆಯುತ್ತಿದ್ದರೆ ಇನ್ನೊಂದೆಡೆ ಕುಟುಂಬಗಳು ಕಲೆತು, ಬೆರೆತು ಆಡುವುದಕ್ಕಾಗಿ ಕೆಲವು ಆಟಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ವಾಟರ್ ಗ್ಲಾಸ್ ಬ್ಯಾಲೆನ್ಸ್, ಮ್ಯೂಸಿಕಲ್ ಮೆಮೊರಿ ಗೇಮ್, ಹ್ಯಾಂಡ್ ಫೂಟ್ ಸ್ಟೆಪ್ ಗೇಮ್, ರಿಂಗ್ ಪಾಸಿಂಗ್, ಪಿಕ್ ಅಂಡ್ ಆಕ್ಟ್, ಟಂಗ್ ಟ್ವಿಸ್ಟರ್, ಗ್ಲಾಸ್ ಪಾಸಿಂಗ್, ಬ್ರಶ್ -ಬಡ್ ಗೇಮ್, ರಬ್ಬರ್ ಬ್ಯಾಂಡ್ – ಟೂತ್ ಪೀಕ್ ಪಾಸಿಂಗ್, ಬ್ರಶ್ ಇನ್ ಬಾಟಲ್, ಹಗ್ಗ ಜಗ್ಗಾಟ, ಶೋಟ್ ಫುಟ್, ವೈಯರ್ ಲೂಪ್ ಗೇಮ್, ಗೋಣಿ ಚೀಲದ ಓಟ, ಸೈಕಲ್ ಟಯರ್ ಓಟ, ಬೆಲೂನ್ ಬ್ಯಾಲೆನ್ಸ್ ಓಟ, ಜ್ಯೂಸ್ ಕುಡಿಯುವ ಸ್ಪರ್ಧೆ (ಟ್ವಿಸ್ಟ್), ವಾಟರ್ ಗ್ಲಾಸ್ ಬ್ಯಾಲೆನ್ಸ್, ಬಾಟಲಿಯಲ್ಲಿ ನೀರು ತುಂಬಿಸುವ ಸ್ಪರ್ಧೆ, ಒಗ್ಗಟ್ಟಿನಲ್ಲಿ ಶಕ್ತಿ ಸಹಿತ ವಿವಿಧ ಸ್ಪರ್ಧೆಗಳು ಇಲ್ಲಿ ನಡೆಯಲಿವೆ.
ಒಂಟೆ ಮತ್ತು ಕುದುರೆ ಸವಾರಿ
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂಟೆ ಹಾಗೂ ಕುದುರೆಯ ಮೇಲೆ ಸವಾರಿ ಮಾಡಬೇಕೆನ್ನುವ ಆಸೆ ಇರುತ್ತದೆ. ಅದು ಉಚಿತವಾಗಿ ಮತ್ತು ಸುಲಭವಾಗಿ ಈಡೇರುವುದು ಜಿಪಿಎಲ್ ಉತ್ಸವದ ಮೈದಾನದಲ್ಲಿ ಎಂದರೆ ಅತಿಶಯೋಕ್ತಿ ಆಗಲಾರದು. ಇಲ್ಲಿ ಮಕ್ಕಳು, ವಯಸ್ಕರು ಒಂಟೆ, ಕುದುರೆ ಸವಾರಿ ಮಾಡುತ್ತಾ ಮೈದಾನದ ಸುತ್ತ ತಿರುಗಾಡುವ ಅವಕಾಶವಿದೆ.
ಪ್ಲೀ ಮಾರುಕಟ್ಟೆ
ಜಿಪಿಎಲ್ ಉತ್ಸವದಲ್ಲಿ ನಮ್ಮ ಸಮಾಜದ ಗೃಹ ಉತ್ಪನ್ನ ತಯಾರಿಸುವ ಬಂಧು ಬಾಂಧವರಿಗೆ ಪ್ರತಿ ವರ್ಷ ಹೊಸ ಮಾರುಕಟ್ಟೆಯನ್ನು ಸ್ಥಾಪಿಸುವ ಸುವರ್ಣ ಅವಕಾಶವೂ ದೊರಕುತ್ತದೆ. ನಿತ್ಯೋಪಯೋಗಿ ವಸ್ತುಗಳು, ಬಟ್ಟೆಗಳು, ಕರಕುಶಲ ವಸ್ತುಗಳೊಂದಿಗೆ, ಹೋಮೇಡ್ ಆಹಾರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಸುವ ಅವಕಾಶ ಈ ಬಾರಿಯೂ ಇದೆ. ಈ ಬಾರಿ ನೂರಕ್ಕೂ ಮಿಕ್ಕಿ ವಿವಿಧ ಸ್ಟಾಲ್ ಗಳು ನೊಂದಾಯಿಸಲ್ಪಟ್ಟಿದ್ದು, ಆ ವಸ್ತು ಪ್ರದರ್ಶನ ಮಹಿಳಾ ಸಮೂಹವನ್ನು ವಿಶೇಷವಾಗಿ ಆಕರ್ಷಿಸುತ್ತದೆ ಎನ್ನುವುದಕ್ಕೆ ಸಂಶಯವಿಲ್ಲ.
ಜಿಂಭೆ ಸಂಗೀತ ಕಾರ್ಯಕ್ರಮ, ಕುಳ್ಳಪ್ಪು ನಾಟಕ ತಂಡದ ಗುಜರಿ ಗೋವಿಂದು ಕೊಂಕಣಿ ನಾಟಕ, ಝುಂಬಾ ಹಾಗೂ 2026 ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ನೀಡುವ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕಾಗಿಯೇ ವಿಶೇಷವಾಗಿ ಆಯೋಜಿಸಲಾಗಿದೆ. ಮಾಧ್ಯಮ ಮಿತ್ರರು ಈ ಕಾರ್ಯಕ್ರಮಕ್ಕೆ ಪೂರ್ಣ ರೀತಿಯ ಸಹಕಾರವನ್ನು ನೀಡಬೇಕಾಗಿ ವಿನಂತಿಸಿಕೊಂಡಿದೆ.

